ನಿಮ್ಮ ದೇಹದ ತೂಕ ಹೆಚ್ಚುತ್ತಿದ್ದು, ಅದಕ್ಕೆ ಕೇವಲ ಜಂಕ್ ಆಹಾರ ಮತ್ತು ಕಡಿಮೆ ವ್ಯಾಯಾಮ ಎಂದು ನೀವು ತಿಳಿದಿರಬಹುದು. ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ರಾಹೀನತೆ ಕೂಡ ದೇಹದ ತೂಕ ಹೆಚ್ಚಿಸುತ್ತದೆಯಂತೆ.
ಹಾಗಾಗಿ ದಿನದಲ್ಲಿ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು ಎಂದು ತಿಳಿಸಿದೆ.
ಒಹಿಹೋ ವಿಶ್ವವಿದ್ಯಾಲಯದ ಅಧ್ಯಯನ ಪ್ರಕಾರ, ನಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾರ್ಬೊಹೈಡ್ರೇಟ್, ಕೆಫಿನ್, ಅತಿಯಾದ ಸಿಹಿ ಹಾಗು ಹೆಚ್ಚಿನ ಕೊಬ್ಬಿನಂಶ ಇರುವ ಆಹಾರ ಸೇವಿಸಿದರೆ ನಿದ್ರಾಹೀನತೆ ಸಮಸ್ಯೆಯಾಗುತ್ತದೆಯಂತೆ. ಈ ಅಧ್ಯಯನವನ್ನು ಜರ್ನಲ್ ಆಫ್ ದಿ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡೈಯಟಿಕ್ಸ್ ಪ್ರಕಟಿಸಿದೆ. ಇವರು ಪ್ರಕಟಿಸಿದ ವರದಿ ಪ್ರಕಾರ ದಿನದ ವೇಳೆಯಲ್ಲಿ ಜಂಕ್ ಅಥವಾ ಕ್ಯಾಲೋರಿ ಹೆಚ್ಚಿರುವ ತಿಂಡಿಗಳನ್ನು ತಿಂದವರು, ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ಲವಂತೆ.
ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಸುಮಾರು ಇಪ್ಪತ್ತು ಸಾವಿರ ಜನರ ಬಳಿ ಪ್ರಶ್ನೆ ಆಧರಿಸಿ ಡೇಟಾ ಪಡೆದುಕೊಂಡಿದ್ದಾರೆ, ಇವರೆಲ್ಲರ ವಯಸ್ಸು ಇಪ್ಪತ್ತರಿಂದ ಅರವತ್ತು. ಇವರೆಲ್ಲರಿಂದ ತಾವು ತಿನ್ನುವ ಆಹಾರ ಮತ್ತು ಮಲಗುವ ಮಾದರಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇವರಲ್ಲಿ ಬಹುತೇಕ (ಶೇಕಡ 95.5%) ಮಂದಿ ಕಡಿಮೆ ನಿದ್ದೆ ಮಾಡುತ್ತಿದ್ದವರು ದಿನದಲ್ಲಿ ಯಾವುದಾದರೊಂದು ಜಂಕ್ ಆಹಾರ ಪದಾರ್ಥ ಸೇವಿಸುತ್ತಿದ್ದರೆಂದು ತಿಳಿದು ಬಂದಿದೆ. ಅಷ್ಟೇ ಅಲ್ಲ, ಹೆಚ್ಚಿನ ಹೊತ್ತು ಎದ್ದಿದ್ದಲ್ಲಿ, ಮತ್ತಷ್ಟು ಜಂಕ್ ಆಹಾರ ಸೇವಿಸಿ, ಸಮಸ್ಯೆ ಜಾಸ್ತಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆ. ಹಾಗಾಗಿ, ಒಳ್ಳೆಯ ಪೌಷ್ಟಿಕ ಆಹಾರ ಒಳ್ಳೆ ನಿದ್ದೆ ತರುತ್ತದೆ ಎಂದು ತಿಳಿಸಿದೆ.