ರೈಲು ಪ್ರಯಾಣದ ವೇಳೆ ಧೂಮಪಾನ ಅಥವಾ ಮದ್ಯಪಾನ ಮಾಡುವುದಕ್ಕೆ ನಿಷೇಧವಿದ್ದು ಸಿಕ್ಕಿಬಿದ್ದವರಿಗೆ ದಂಡದ ಜೊತೆಗೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇಷ್ಟಾದರೂ ಕೂಡ ಕೆಲವರು ಈ ನಿಯಮವನ್ನು ಉಲ್ಲಂಘಿಸುವ ಮೂಲಕ ಸ್ವತಃ ಸಂಕಷ್ಟಕ್ಕೆ ಸಿಲುಕುವುದರ ಜೊತೆಗೆ ಸಹ ಪ್ರಯಾಣಿಕರಿಗೂ ಅಪಾಯಕಾರಿಯಾಗಿ ಪರಿಣಮಿಸುತ್ತಾರೆ.
ಇದೀಗ ಇಂಥವುದೇ ಒಂದು ಘಟನೆ ಟಾಟಾ ನಗರ್ – ಕಥಿಹಾರ್ ನಡುವೆ ಸಂಚರಿಸುವ ರೈಲಿನಲ್ಲಿ ನಡೆದಿದ್ದು, ಪಶ್ಚಿಮ ಬಂಗಾಳದ ಅಸಿನ್ಸಾಲ್ ನಲ್ಲಿ ರೈಲು ಏರಿದ ಯುವತಿ ರಾತ್ರಿ ಪೂರ ಗಾಂಜಾ ಸೇವಿಸುವುದರ ಜೊತೆಗೆ ಧೂಮಪಾನವನ್ನೂ ಮಾಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಹ ಪ್ರಯಾಣಿಕರೊಬ್ಬರು ಇದರ ವಿಡಿಯೋ ತೆಗೆದು ಟ್ವಿಟರ್ ನಲ್ಲಿ ರೈಲ್ವೆ ಇಲಾಖೆಗೆ ಟ್ಯಾಗ್ ಮಾಡಿದ್ದು, ಈ ಯುವತಿ ಗಾಂಜಾ ಹಾಗೂ ಧೂಮಪಾನ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಟ್ವೀಟ್ ಅನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇಂತಹ ಪ್ರಯಾಣಿಕರನ್ನು ಒಂದು ವರ್ಷದ ಕಾಲ ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.