ಸಾಮಾನ್ಯವಾಗಿ ಜನರು ಒಂದಷ್ಟು ವಿರಾಮದ ಸಮಯವನ್ನು ಹಾಯಾಗಿ ಇಷ್ಟದ ಖಾದ್ಯಗಳನ್ನು ಸೇವಿಸಿ ಬರೋಣವೆಂದು ರೆಸ್ಟೋರೆಂಟ್ಗೆ ಭೇಟಿ ಕೊಡುತ್ತಾರೆ.
ಆದರೆ ಅದೇ ರೆಸ್ಟೋರೆಂಟ್ಗಳಲ್ಲಿ ಜೀವಕ್ಕೇ ಕುತ್ತು ಬರುವಂಥ ಘಟನೆಗಳು ಜರುಗಿದರೆ ಹೇಗಾಗಬೇಡ? ಚೀನಾದ ಜ಼ೆಂಗ್ಶೌನ ರೆಸ್ಟೋರೆಂಟ್ ಒಂದರಲ್ಲಿ ಹೀಗೊಂದು ದುರ್ಘಟನೆ ಜರುಗಿದೆ.
45 ಕೆಜಿ ತೂಕದ ಗಾಜಿನ ಬಾಗಿಲೊಂದು ತನ್ನ ಫ್ರೇಂನಿಂದ ಕಿತ್ತುಕೊಂಡ ಪರಿಣಾಮ ಇನ್ನೇನು ಗ್ರಾಹಕರಿಗೆ ಬಡಿಯುವ ಸಾಧ್ಯತೆ ಇತ್ತು. ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ರೆಕಾರ್ಡ್ ಆಗಿದೆ. ರೆಸ್ಟೋರೆಂಟ್ನ ಹೊರಭಾಗದಲ್ಲಿ ಜನರು ಆರಾಮವಾಗಿ ಕುಳಿತು ಆಹಾರ ಸೇವಿಸುತ್ತಾ ಹರಟುತ್ತಿದ್ದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ.
ನಾಲ್ವರು ಕುಳಿತಿದ್ದ ಟೇಬಲ್ ಒಂದರ ಮೇಲೆ ಅಪ್ಪಳಿಸಿದ ಈ ಗಾಜಿನ ಬಾಗಿಲು ಇನ್ನೇನು ಅವರಲ್ಲಿ ಒಬ್ಬರಿಗೆ ಜೋರಾಗಿ ಬಡಿಯುವುದು ಸ್ವಲ್ಪದರಲ್ಲಿ ತಪ್ಪಿದೆ. ಈ ವ್ಯಕ್ತಿಯ ತೋಳಿಗೆ ಬಡಿದಿದ್ದು, ಅದೃಷ್ಟವಶಾತ್ ದೊಡ್ಡ ಗಾಯಗಳಾಗಿಲ್ಲ.
ಕೂಡಲೇ ಸ್ಥಳಕ್ಕೆ ಧಾವಿಸುವ ರೆಸ್ಟೋರೆಂಟ್ ಮಾಲೀಕ ಲೀ, ಆ ಗಾಜಿನ ಬಾಗಿಲನ್ನು ತಕ್ಷಣ ಹಾಗೇ ಮೇಲೆತ್ತಿ ಬದಿಗೆ ಇಟ್ಟಿದ್ದಾರೆ.