ಪುಣೆ ಮಹಾನಗರ ಪಾಲಿಕೆಯಲ್ಲಿನ ಅಧಿಕಾರಿಯೊಬ್ಬರು ಅತಿಕ್ರಮಣ ವಿರುದ್ಧದ ಕಾರ್ಯಾಚರಣೆಯಲ್ಲಿ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅತಿಕ್ರಮಣ ವಿಭಾಗದ ಡೆಪ್ಯುಟಿ ಕಮಿಷನರ್ ಮಾಧವ್ ಜಗತಾಪ್ ಅವರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫರ್ಗುಸನ್ ರಸ್ತೆಯಲ್ಲಿರುವ ಆಹಾರ ಮಳಿಗೆಯೊಂದರಲ್ಲಿ ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಅವರು ಒರಟಾಗಿ ವರ್ತಿಸಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಕಾರ್ಯಾಚರಣೆ ವೇಳೆ ಮಾಧವ್ ಜಗತಾಪ್ ಅವರು ಆಹಾರದ ಪಾತ್ರೆಗಳನ್ನು ಒದೆಯುವುದು ಕಂಡುಬಂದಿದೆ.
ಏಪ್ರಿಲ್ 5ರ ಕಾರ್ಯಾಚರಣೆಯ ವಿಡಿಯೋ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅತಿಕ್ರಮಣ ವಿಭಾಗದ ತಂಡವೊಂದು ಕ್ರಮ ಕೈಗೊಳ್ಳಲು ಫರ್ಗುಸನ್ ರಸ್ತೆಗೆ ತೆರಳಿದ್ದು, ಪಾಲಿಕೆ ಅತಿಕ್ರಮಣ ವಿಭಾಗದ ಉಪ ಆಯುಕ್ತ ಮಾಧವ್ ಜಗತಾಪ್ ಆ ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ಮಾಧವ್ ಜಗತಾಪ್ ತುಂಬಾ ಅಶಿಸ್ತಿನ ಮತ್ತು ಆಕ್ರಮಣಕಾರಿಯಾಗಿ ವರ್ತಿಸಿದರು. ಆಹಾರ ಮಳಿಗೆಗಳಿಗೆ ಬಲವಂತವಾಗಿ ಒದ್ದು ಗಲಾಟೆ ಮಾಡಿದರು. ಈ ವೇಳೆ ಬಿಸಿ ಎಣ್ಣೆ ಆಕಸ್ಮಿಕವಾಗಿ ಘಟನಾ ಸ್ಥಳದಲ್ಲಿದ್ದ ಉದ್ಯೋಗಿಗಳ ಮೇಲೆ ಚಿಮ್ಮಿತು.
ಅತಿಕ್ರಮಣ ಮಾಡಿರುವ ಶ್ರೀಮಂತ ವ್ಯಕ್ತಿಗಳ ವಿರುದ್ಧ ಕ್ರಮಕ್ಕಾಗಿ ನಿರಂತರ ಮನವಿ ಮಾಡಿದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿ ಬಡವರ, ಸಣ್ಣ ವ್ಯಾಪಾರಿಗಳ ಅಂಗಡಿ, ಮಳಿಗೆ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ .
ಸಣ್ಣ ವ್ಯಾಪಾರ ಮಾಲೀಕರ ಪಾತ್ರೆಗಳು ಮತ್ತು ಅಂಗಡಿಗಳ ಮೇಲೆ ಒದೆಯುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಾಧವ್ ಜಗತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವ್ಯಾಪಕ ಕೂಗು ಕೇಳಿಬಂದಿದೆ.
https://www.youtube.com/watch?v=Y-MrR3qTKKQ