ಮುಂಬೈ: ಮುಂಬೈ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಮಹಿಳೆ ಮತ್ತು ಆಕೆಯ ಮಗುವು ಬದುಕುಳಿದಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ಜಾರಿ ಬಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಕಳೆದ ಮಂಗಳವಾರ ಮಧ್ಯಾಹ್ನ, ಮಹಿಳೆಯೊಬ್ಬರು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಮಂಖುರ್ದ್ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದರು. ರೈಲು ತನ್ನ ವೇಗವನ್ನು ಹೆಚ್ಚಿಸುತ್ತಿದ್ದಂತೆ, ಪ್ರಯಾಣಿಕರು ಹತ್ತಲು ಧಾವಿಸಿದರು. ಈ ಸಮಯದಲ್ಲಿ ಮಹಿಳೆ ಸಮತೋಲನವನ್ನು ಕಳೆದುಕೊಂಡು ಜಾರಿಬಿದ್ದರು.
ಇದನ್ನು ಕಂಡ ಪ್ಲಾಟ್‌ಫಾರ್ಮ್‌ನಲ್ಲಿದ್ದ ರೈಲ್ವೆ ಪೊಲೀಸ್ ಪಡೆ ಅಧಿಕಾರಿ ಅಕ್ಷಯ್ ಸೋಯೆ ಸಹಾಯಕ್ಕೆ ಧಾವಿಸಿ ಇಬ್ಬರನ್ನು ಎಳೆದುಜೀವ ಕಾಪಾಡಿದ್ದಾರೆ. ಆರ್‌ಪಿಎಫ್ ಮುಂಬೈ ವಿಭಾಗವು ಘಟನೆಯ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದು, ಪೊಲೀಸ್ ಅಧಿಕಾರಿಯ ತ್ವರಿತ ಚಿಂತನೆ ಮತ್ತು ವೀರೋಚಿತ ಪ್ರಯತ್ನವನ್ನು ಶ್ಲಾಘಿಸಿದೆ.