
ಸ್ಥಳೀಯ ಬಿಜೆಪಿ ನಾಯಕ ಪ್ರವೇಶ್ ಶುಕ್ಲಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಇನ್ನೊಬ್ಬ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮಧ್ಯ ಪ್ರದೇಶ ಪೊಲೀಸರು ಆರೋಪಿ ಪ್ರವೇಶ್ ಶುಕ್ಲಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದೆ ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ 294, 504 ಹಾಗೂ ಎಸ್ಸಿ/ ಎಸ್ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸಿದ್ದಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಂಜುಲತಾ ಪಟ್ಲೆ ಮಾತನಾಡಿದ್ದು, ಆರೋಪಿಯ ವಿಚಾರಣೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್ಪಿ ಪಟ್ಲೆ, ನಾವು ಆರೋಪಿ ಪ್ರವೇಶ್ ಶುಕ್ಲಾರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವಿಷಯದಲ್ಲಿ ನಾವು ಮುಂದಿನ ಕಾನೂನು ಕ್ರಮವನ್ನು ಶೀಘ್ರದಲ್ಲಿಯೇ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಬುಡಕಟ್ಟು ಜನಾಂಗಕ್ಕೆ ಸೇರಿದ್ದ ವ್ಯಕ್ತಿಯೊಬ್ಬರ ಮೇಲೆ ಸ್ಥಳೀಯ ಬಿಜೆಪಿ ನಾಯಕ ಮೂತ್ರ ವಿಸರ್ಜನೆ ಮಾಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿಡಿಯೋ ಸಂಬಂಧ ಸ್ವತಃ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದರು, ಸಿಧಿ ಜಿಲ್ಲೆಯ ವೈರಲ್ ವಿಡಿಯೋ ನನ್ನ ಗಮನಕ್ಕೆ ಬಂದಿದೆ. ನಾವು ಅಪರಾಧಿಯನ್ನು ಬಂಧಿಸಲು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಎನ್ಎಸ್ಎ ವಿಧಿಸಲು ಸೂಚನೆ ನೀಡಿದ್ದೇವೆ ಎಂದು ಹೇಳಿದ್ದರು.