ವಿಯೆಟ್ನಾಂ: ನೌಕರನೊಬ್ಬ ಫೋನ್ ರಿಪೇರಿ ಮಾಡುತ್ತಿರುವ ವೇಳೆ ಮೊಬೈಲ್ ಫೋನ್‌ನ ಬ್ಯಾಟರಿಯು ಜ್ವಾಲೆಯಾಗಿ ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ವಿಯೆಟ್ನಾಂನ ಥಾಯ್ ನ್ಗುಯೆನ್‌ನಲ್ಲಿರುವ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಕೆಲಸಗಾರ ಫೋನ್ ರಿಪೇರಿ ಮಾಡುತ್ತಿದ್ದಾಗ ಒಮ್ಮೆಲೆ ಸ್ಫೋಟ ಸಂಭವಿಸಿದ್ದು, ಫೋನ್‌ನ ಬ್ಯಾಟರಿಯು ಹೊತ್ತಿ ಉರಿದಿದೆ. ಅದೃಷ್ಟವಶಾತ್ ನೌಕರನಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಮೊಬೈಲ್ ಸ್ಫೋಟಗೊಂಡ ವೇಳೆ ಬರಿಗಾಲಿನಲ್ಲಿದ್ದ ನೌಕರ, ಉರಿಯುತ್ತಿದ್ದ ಫೋನ್ ಅನ್ನು ನೆಲದ ಮೇಲೆ ಎಸೆದಿದ್ದಾನೆ. ಸ್ಫೋಟ ಸಂಭವಿಸುತ್ತಿದ್ದಂತೆ ಅಂಗಡಿಯಲ್ಲಿದ್ದ ಮತ್ತೊಬ್ಬ ನೌಕರ ಕೂಡ ಭಯದಿಂದ ದೂರ ಸರಿದಿದ್ದಾನೆ.
ಈ ಘಟನೆಯು ನವೆಂಬರ್ 5, 2021 ರಂದು ನಡೆದಿದ್ದು, ಇದನ್ನು ಇತ್ತೀಚೆಗೆ ವೈರಲ್‌ಹಾಗ್ ಎಂಬ ಯೂಟ್ಯೂಬ್ ಚಾನೆಲ್ ಹಂಚಿಕೊಂಡಿದೆ. ನೌಕರ ಫೋನ್ ರಿಪೇರಿ ಮಾಡುತ್ತಿದ್ದಾಗ ಮೊಬೈಲ್ ಬ್ಯಾಟರಿ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಒಂದು ವೇಳೆ ಮಾಲೀಕನ ಜೇಬಿನಲ್ಲಿ ಸ್ಮಾರ್ಟ್ ಫೋನ್ ಸ್ಫೋಟಗೊಂಡಿದ್ದರೆ ಏನಾಗುತ್ತಿತ್ತು ಎಂದು ಬಳಕೆದಾರನೊಬ್ಬ ಆತಂಕದಿಂದ ಪ್ರತಿಕ್ರಿಯಿಸಿದ್ದಾರೆ.