ಅಮೆರಿಕದ ಮಿಸ್ಸಿಸ್ಸಿಪ್ಪಿ ಚಂಡಮಾರುತವು ದಿನದಿಂದ ದಿನಕ್ಕೆ ತನ್ನ ವಿಧ್ವಂಸಕ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಸಾಗಿದ್ದು, ಹವಾಮಾನ ಬದಲಾವಣೆಯ ದುಷ್ಪರಿಣಾಮದ ಎಚ್ಚರಿಕೆ ಕೊಡುತ್ತಿರುವಂತೆ ಕಾಣುತ್ತಿದೆ.
ಚಂಡಮಾರುತ ಸೃಷ್ಟಿಸಿರುವ ಅನಾಹುತದ ವರದಿ ಮಾಡುತ್ತಿದ್ದ ವೇಳೆ ಸುದ್ದಿ ಹವಾಮಾನ ವರದಿಗಾರರೊಬ್ಬರು ಭಾವುಕರಾಗಿದ್ದಾರೆ.
WTVA ಹೆಸರಿನ ಸುದ್ದಿ ವಾಹಿನಿಯ ಹವಾಮಾನ ವರದಿಗಾರ ಮ್ಯಾಟ್ ಲೌಬ್ಹಾನ್ ಚಂಡಮಾರುತದ ಚಲನೆಯನ್ನು ನಕ್ಷೆಯ ಮೇಲೆ ತೋರಿಸುವ ಸಂದರ್ಭದಲ್ಲಿ ಹೀಗೆ ಭಾವುಕರಾಗಿ ದೇವರಿಗೆ ಮೊರೆ ಹೋಗಿ ಕಾಪಾಡಲು ಕೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಚಂಡಮಾರುತವು ಅಮೋರಿ ಹಸರಿನ ಪಟ್ಟಣಕ್ಕೆ ಅಪ್ಪಳಿಸಲಿದೆ ಎಂದು ಅರಿಯುತ್ತಲೇ ಹಾಗೇ ಕೆಳಬಾಗಿ ’ಓ ಮ್ಯಾನ್’ ಎಂದು ಭಾರೀ ನಿಟ್ಟುಸಿರು ಬಿಟ್ಟಿದ್ದಾರೆ.
“ಡಿಯರ್ ಜೀಸಸ್, ದಯವಿಟ್ಟು ಅವರಿಗೆ ಸಹಾಯ ಮಾಡು. ಅಮೆನ್,” ಎಂದು ಲೌಬ್ಹಾನ್ ಈ ವೇಳೆ ಕೇಳಿಕೊಂಡಿದ್ದಾರೆ.
ಮಿಸ್ಸಿಸ್ಸಿಪ್ಪಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆಯು ಶನಿವಾರದ ವೇಳೆಗೆ 25ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇದೇ ವೇಳೆ ಡಜ಼ನ್‌ಗಟ್ಟಲೇ ಜನರು ಗಾಯಗೊಂಡಿದ್ದಾರೆ ಎಂದು ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣೆ ಸಂಸ್ಥೆ ತಿಳಿಸಿದೆ.
ಚಂಡಮಾರುತದ ಅಬ್ಬರಕ್ಕೆ ಇಡಿಯ ಮನೆಗಳೇ ಉದುರಿ ಹೋಗಿದ್ದು, ವಾಹನಗಳೆಲ್ಲಾ ತಲೆಕೆಳಗಾಗಿ ಬಿದ್ದಿರುವುದನ್ನು ಸುದ್ದಿ ಜಾಲಗಳು ತೋರುತ್ತಿದ್ದು, ಬೆಳಕಿನ ಅಭಾವದ ನಡುವೆಯೇ ಜನರು ಅವಶೇಷಗಳ ನಡುವೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ.