ಮುಂಬೈ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂಬ ವಿವಾದದ ನಡುವೆಯೇ ಮಂಗಳವಾರ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಇತ್ತೀಚಿಗೆ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನದ ಪ್ರಸಾದ ಪ್ಯಾಕೆಟ್‌ಗಳಲ್ಲಿ ಇಲಿಗಳು ಕಾಣಿಸಿಕೊಂಡಿವೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ, ಭಕ್ತರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಆದರೆ, ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್(ಎಸ್‌ಎಸ್‌ಜಿಟಿ) ಈ ಆರೋಪಗಳನ್ನು ನಿರಾಕರಿಸಿದೆ ಮತ್ತು ತನಿಖೆಯನ್ನು ಪ್ರಾರಂಭಿಸಿದೆ.
ಶಿವಸೇನಾ ನಾಯಕ ಮತ್ತು ಎಸ್‌ಎಸ್‌ಜಿಟಿ ಅಧ್ಯಕ್ಷ ಸದಾ ಸರ್ವಾಂಕರ್ ಮಾತನಾಡಿ, ಪ್ರತಿದಿನ ಲಕ್ಷ ಲಕ್ಷ ಲಡ್ಡುಗಳನ್ನು ವಿತರಿಸಲಾಗುತ್ತದೆ. ಅವುಗಳನ್ನು ಸಿದ್ಧಪಡಿಸಿದ ಸ್ಥಳವು ಸ್ವಚ್ಛವಾಗಿದೆ. ವೀಡಿಯೊ ಕೊಳಕು ಸ್ಥಳವನ್ನು ತೋರಿಸುತ್ತದೆ. ಇದು ದೇವಾಲಯದದಲ್ಲ ಮತ್ತು ಹೊರಗೆ ಎಲ್ಲೋ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವೀಡಿಯೋ ಮೂಲವನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ. ಡಿಸಿಪಿ ಶ್ರೇಣಿಯ ಅಧಿಕಾರಿಯು ತನಿಖೆ ಮೇಲ್ವಿಚಾರಣೆ ನಡೆಸುತ್ತಾರೆ. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆಹಾರ ಸುರಕ್ಷತೆಗೆ ದೇವಾಲಯದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ತುಪ್ಪ ಮತ್ತು ಗೋಡಂಬಿ ಸೇರಿದಂತೆ ಪ್ರಸಾದಕ್ಕೆ ಬಳಸುವ ಪದಾರ್ಥಗಳನ್ನು ಬಳಸುವ ಮೊದಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಯೋಗಾಲಯದಲ್ಲಿ ಕಠಿಣ ಪರೀಕ್ಷೆಗೆ ಒಳಗಾಗುತ್ತದೆ. ಇದರರ್ಥ ಭಕ್ತರಿಗೆ ನೀಡುವ ಪ್ರಸಾದವು ಶುದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಪೂರ್ಣ ಗಮನವನ್ನು ನೀಡುತ್ತೇವೆ ಎಂದರ್ಥ ಎಂದು ಹೇಳಿದ್ದಾರೆ.