ದೀಪಾವಳಿ ಹಬ್ಬ ಎಂದರೆ ಪಟಾಕಿಗಳ ಹಬ್ಬ. ಆದರೆ ಪಟಾಕಿ ಸಿಡಿಸುವಾಗ ಹುಚ್ಚು ಸಾಹಸ ಮಾಡಿದ ಯುವಕರ ಗುಂಪೊಂದನ್ನು ಅಹಮದಾಬಾದ್‌ನ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ, ಈ ಯುವಕರು ಕಾರಿನ ಚಾವಣಿಯ ಮೇಲೆ ಪಟಾಕಿ ಸಿಡಿಸುತ್ತಿದ್ದರು.
ಇದರ ವಿಡಿಯೋ ಈಗ ವೈರಲ್ ಆಗಿದೆ. ಒಂದಿಷ್ಟು ಯುವಕರು ಚಲಿಸುತ್ತಿರುವ ಕಾರಿನ ಚಾವಣಿಯ ಮೇಲೆ ಪಟಾಕಿ ಸಿಡಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದರ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ಮರುದಿನ ಎಲ್ಲರನ್ನೂ ಬಂಧಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ ನಗರದಲ್ಲಿ ಅವ್ಯವಸ್ಥೆ ಉಂಟು ಮಾಡಿದ್ದಕ್ಕಾಗಿ ಬಂಧನ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇವರು ಕಾರಿನಲ್ಲಿ ಹೀಗೆ ಪಟಾಕಿ ಸಿಡಿಸುತ್ತಾ ಹೋಗುತ್ತಿದ್ದರಿಂದ ರಸ್ತೆಯಲ್ಲಿ ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಪಟಾಕಿಯಿಂದಾಗಿ ಹಲವರು ದಿಗ್ಭ್ರಮೆಗೊಂಡು ವಾಹನ ಚಲಾಯಿಸಲು ಹೆದರುವಂತಾಗಿತ್ತು. ಇಂಥ ಕೃತ್ಯವನ್ನು ನಾವು ಸಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅಹಮದಾಬಾದ್ ಪೊಲೀಸರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋ ಟ್ವಿಟರ್ನಲ್ಲಿ ಇದಾಗಲೇ 2.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿವೆ. 11 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಲಾಗಿದೆ. ಈ ಯುವಕರ ಪರವಾಗಿ ಕೆಲವರು ನಿಂತಿದ್ದರೆ, ಪೊಲೀಸ್ ಇಲಾಖೆ ಮಾಡಿದ್ದು ಸರಿ ಇದೆ ಎಂದು ಹಲವರು ಹೇಳಿದ್ದಾರೆ.