ಚೆನ್ನೈ: ಬಿಡುಗಡೆಯಾದ ಸುಮಾರು ಎರಡು ತಿಂಗಳಾದರೂ ‘ಪೊನ್ನಿಯಿನ್ ಸೆಲ್ವನ್: 1 ಚಿತ್ರವು, ಅದರ ಕಥಾವಸ್ತು ಮತ್ತು ಸ್ಟಾರ್ ಕಾಸ್ಟ್‌ನ ಕೆಲವು ಅದ್ಭುತ ನಟನೆಯಿಂದ ಜನರು ಚಿತ್ರ ನೋಡಲು ಮುಗಿ ಬೀಳುತ್ತಿದ್ದಾರೆ. ಇದರ ನಡುವೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ತ್ರಿಷಾ ಇತ್ತೀಚೆಗೆ ವೀಡಿಯೊವನ್ನು ಹಂಚಿಕೊಂಡಿದ್ದು, ಇದನ್ನು ನೋಡಿ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ತನ್ನ ತಾಯಿಯ ಮಡಿಲಲ್ಲಿರುವ ಮಗುವೊಂದು ರಸ್ತೆಬದಿಯಲ್ಲಿರುವ ತ್ರಿಷಾ ಅವರ ಹೋರ್ಡಿಂಗ್‌ಗೆ ಮುತ್ತಿಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕೇವಲ ಒಂದು ದಿನದಲ್ಲಿ ವೀಡಿಯೋ 1.9 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದಕ್ಕೆ ಕಾಮೆಂಟ್‌ಗಳ ಸುರಿಮಳೆಯೇ ಬರುತ್ತಿವೆ. ನೀವು ಎಲ್ಲರ ಕ್ರಷ್ ಎಂದು ಒಬ್ಬಾತ ಹೇಳಿದರೆ, ನೀವು ಪ್ರತಿ ಪೀಳಿಗೆಗೆ ಮೆಚ್ಚಿನ ನಟಿ ಎಂದು ಇನ್ನು ಕೆಲವರು ಹೇಳಿದ್ದಾರೆ. ಇವುಗಳನ್ನು ಶೇರ್ ಮಾಡಿಕೊಂಡಿರುವ ನಟಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಮೂಲಕ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ತಯಾರಾಗಿದೆ. ಕಲ್ಕಿ ಕೃಷ್ಣಮೂರ್ತಿ ಅವರು 1955ರಲ್ಲಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬಂದಿದೆ.
ಕನ್ನಡ, ತಮಿಳು, ಹಿಂದಿ ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಇದು ಬಿಡುಗಡೆ ಆಗಿದೆ. ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಷಾ ಕೃಷ್ಣನ್, ಕಾರ್ತಿ, ಐಶ್ವರ್ಯಾ ರೈ ಬಚ್ಚನ್, ಪ್ರಕಾಶ್ ರಾಜ್ ಮುಂತಾದವರು ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ನಟಿಸಿದ್ದಾರೆ.