ಕೇರಳ: ಕತಾರ್ನಲ್ಲಿ ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭವಾದಾಗಿನಿಂದಲೂ ಫುಟ್ಬಾಲ್ ಜ್ವರ ಹಲವೆಡೆ ಸುಳಿದಾಡುತ್ತಿದೆ. ಭಾರತ ಇದರಲ್ಲಿ ಭಾಗವಹಿಸದಿದ್ದರೂ ಫುಟ್ಬಾಲ್ ಜ್ವರ ಭಾರತವನ್ನೂ ಬಿಡಲಿಲ್ಲ. ಇಲ್ಲಿ ಫುಟ್ಬಾಲ್ ಅಭಿಮಾನಕ್ಕೇನು ಕಡಿಮೆ ಇಲ್ಲ.
ಇದಕ್ಕೆ ಉದಾಹರಣೆಯಾಗಿ ನಿಂತಿದೆ ಕೇರಳ. ಇಲ್ಲಿಯ ಫುಟ್ಬಾಲ್ ಅಭಿಮಾನಿಗಳು ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಕಟೌಟ್ ನಿರ್ಮಿಸಿದ್ದಾರೆ. ಬರೀ ನಿರ್ಮಿಸಿದ್ದರೆ ಅದು ಇಷ್ಟು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಅರಬ್ಬೀ ಸಮುದ್ರದಲ್ಲಿ 100 ಅಡಿ ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.
ಮೊಹಮದ್ ಸ್ವಧೀಕ್ ಎಂಬುವವರು ಕವರಟ್ಟಿ ದ್ವೀಪದಲ್ಲಿ 100 ಅಡಿ ಆಳದಲ್ಲಿ ಮೆಸ್ಸಿ ಕಟೌಟ್ ಅನ್ನು ಇರಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಈ ವೀಡಿಯೊವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ.
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ ತಡರಾತ್ರಿ ನಡೆಯಲಿದ್ದು, ಎರಡು ಬಾರಿಯ ಚಾಂಪಿಯನ್ ಗಳಾದ ಅರ್ಜೆಂಟೀನಾ ಮತ್ತು ಫ್ರಾನ್ಸ್ ತಂಡಗಳು ಪ್ರಶಸ್ತಿಗಾಗಿ ಆಡಲಿವೆ. ಈ ಹಿನ್ನೆಲೆಯಲ್ಲಿ ಕೇರಳದ ಅರಬ್ಬೀ ಸಮುದ್ರದ 100 ಅಡಿ ಆಳದಲ್ಲಿ ಮೆಸ್ಸಿಗೆ ಶುಭ ಕೋರಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.