ಸಾಮಾನ್ಯವಾಗಿ ಪ್ರಾಣಿಗಳು ದಾಳಿ ಮಾಡುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ನೆಟ್ಟಿಗರಿಗೆ ಪ್ರಾಣಿಗಳ ದಾಳಿಯ ಬಗ್ಗೆ ಅದೇನೋ ಒಂದು ರೀತಿಯ ಕುತೂಹಲ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಡು ಕೋಣ ಮತ್ತು ಆಟೋರಿಕ್ಷಾದ ನಡುವಿನ ಭಯಾನಕ ಎನ್ಕೌಂಟರ್ ತೋರಿಸುವ ವಿಡಿಯೋ ಕಾಣಿಸಿಕೊಂಡಿದೆ.
ವೆೈಲ್ಡ್ಲೆನ್ಸ್ ಇಕೋ ಫೌಂಡೇಶನ್ ಮೈಕ್ರೋ-ಬ್ಲಾಗಿಂಗ್ ಸೈಟ್ನಲ್ಲಿ ಆ ವಿಡಿಯೋ ಅಪ್ಲೋಡ್ ಮಾಡಿದ್ದು, ನೆಟ್ಟಿಗರು ಕಾಡುಕೋಣಗಳಿಂದ ಅಂತರ ಕಾಯ್ದುಕೊಳ್ಳುವಂತೆ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ತಳಿಯ ಕಾಡುಕೋಣದ ಸಾಮರ್ಥ್ಯ ಅಂದಾಜು ಮಾಡುವಂತೆಯೇ ಇಲ್ಲ. ಸರಿಯಾದ ಅಂತರವನ್ನು ಕಾಯ್ದುಕೊಳ್ಳದೇ ಇದ್ದರೆ ಅದು ಮಾರಣಾಂತಿಕವಾಗಬಹುದು ಎಂದು ಎಚ್ಚರಿಕೆಯ ಟ್ವೀಟ್ ಅಲ್ಲಿದೆ.
ಕಾಡಿನ ದಾರಿಯಲ್ಲಿ ಕಾಡುಕೋಣ ಆಟೋರಿಕ್ಷಾದ ಎದುರಿಗೆ ಬಂದು ನಿಂತಿದ್ದು, ಬಳಿಕ ಏಕಾಏಕಿ ದಾಳಿ ಮಾಡುತ್ತದೆ. ಇದು ರಾತ್ರಿಯಲ್ಲಿ ಸಂಭವಿಸಿದ ಕಾರಣ, ಬಹುತೇಕ ಅಸ್ಪಷ್ಟವಾಗಿ ಕಾಣಿಸಿದೆ.
ಆಟೋರಿಕ್ಷಾವನ್ನು ತನ್ನ ಕೋಡಿನಿಂದ ಮೇಲೆತ್ತುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇದನ್ನು ನೋಡಿದ ಎಂತವರೂ ಆಶ್ಚರ್ಯ ಪಡುವುದು ಪಕ್ಕಾ.
ಕಾಡುಕೋಣವು ತನ್ನ ಕೊಂಬುಗಳಿಂದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು, ವಾಹನವನ್ನು ಮಗುಚಲು ಯತ್ನಿಸುತ್ತದೆ. ಅದೃಷ್ಟವಶಾತ್, ಆಟೋರಿಕ್ಷಾ ಸಮತೋಲನವನ್ನು ಮರಳಿ ಪಡೆದುಕೊಂಡಿತು. ಡಿಕ್ಕಿಯ ರಭಸಕ್ಕೆ ವಾಹನದ ಕೆಲವು ಭಾಗಗಳು ಕೆಳಗೆ ಬಿದ್ದಿರುವುದು ಕಂಡುಬಂದಿದೆ. ನಂತರ ದಾಳಿ ಮಾಡಿದ ಗೂಳಿ ಕಾಡಿನತ್ತ ವಾಪಸು ಸಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಈ ವಿಡಿಯೋ ಗಾಬರಿ ಹುಟ್ಟಿಸಿದೆ. ಕೆಲವರು ತಮಗಾದ ಅನುಭವವನ್ನು ಕಾಮೆಂಟ್ ಮಾಡಿದ್ದಾರೆ.