ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವಿಕಾಸ್ ನಗರದಲ್ಲಿ ನೋಡ್ತಾ ನೋಡ್ತಾ ಇದ್ದಂತೆ ರಸ್ತೆ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಆ ಜಾಗದಲ್ಲಿ ಯಾವುದೇ ವಾಹನ ಸಂಚರಿಸದೆ ಇದ್ದ ಕಾರಣ ಯಾವುದೇ ಸಾವು – ನೋವು ಸಂಭವಿಸಿಲ್ಲ. ಲಕ್ನೋದಲ್ಲಿ ಇದೇ ಮೊದಲ ಪ್ರಕರಣವಲ್ಲ. ಕಳೆದ ವರ್ಷವೂ ಇಲ್ಲಿ ರಸ್ತೆ ಕುಸಿದು ಬಿದ್ದಿತ್ತು. ನಂತ್ರ ಅದನ್ನು ದುರಸ್ತಿ ಮಾಡಲಾಗಿತ್ತು.
ವಿಕಾಸ್ ನಗರದ ಸೆಕ್ಟರ್ 08 ಕುರ್ಸಿ ರಸ್ತೆಯಿಂದ ಶಿವಾಜಿ ಮೂರ್ತಿಗೆ ಹೋಗುವ ಮುಖ್ಯರಸ್ತೆ ಬಳಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಅಡಿಯಲ್ಲಿ ಯುಪಿ ಜಲ ನಿಗಮ ಈ ರಸ್ತೆಯಲ್ಲಿ ಕೆಲ ಕೆಲಸ ಮಾಡಿತ್ತು. ಇದ್ರಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.
ಭದ್ರತಾ ವ್ಯವಸ್ಥೆಗಳ ದೃಷ್ಟಿಯಿಂದ, ಲಕ್ನೋ ಮಹಾನಗರ ಪಾಲಿಕೆಯು ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಈ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಲೋಕೋಪಯೋಗಿ ಇಲಾಖೆ, ಜಲಮಂಡಳಿ ಹಾಗೂ ಜಲ ನಿಗಮ ದುರಸ್ಥಿ ಕಾರ್ಯದ ಭರವಸೆ ನೀಡಿದೆ. ಎಕ್ಸ್ ಖಾತೆಯಲ್ಲಿ ರಸ್ತೆ ಕುಸಿತದ ವಿಡಿಯೋ ವೈರಲ್ ಆಗಿದ್ದು, ಜನರು ಕಾಮಗಾರಿ ವಿರುದ್ಧ ಹರಿಹಾಯ್ದಿದ್ದಾರೆ.