ದೇಶಾದ್ಯಂತ ಬಹಳಷ್ಟು ಮಾರ್ಗಗಳಲ್ಲಿ ಸಂಚಾರ ಆರಂಭಿಸಿರುವ ವಂದೇ ಭಾರತ್ ರೈಲುಗಳನ್ನು ನೋಡಲು ಜನರಿಗೆ ಭಾರೀ ಕುತೂಹಲ. ಜನಮಾನಸಲ್ಲಿ ಸೆಲೆಬ್ರಿಟಿ ಸ್ಥಾನಮಾನದಲ್ಲಿ ಓಡುತ್ತಿರುವ ಈ ರೈಲುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಕೆಲವು ಕ್ಷಣಗಳು ಸಾಕು ಎನ್ನುವಂತಾಗಿದೆ.
ಎರಡು ವರ್ಷಗಳ ಹಿಂದೆ ಸಂಚಾರ ಆರಂಭಿಸಿರುವ ವಂದೇ ಭಾರತ್ ರೈಲುಗಳು ಪ್ರತಿ ಬಾರಿ ಭರ್ತಿಯಾಗಿ ಓಡುತ್ತಿವೆ. ಕೇವಲ ಜನಸಾಮಾನ್ಯರಲ್ಲದೇ ರಾಜಕೀಯ ನಾಯಕರಿಗೂ ಈ ರೈಲುಗಳೆಂದರೆ ವಿಶೇಷ ಪ್ರೀತಿ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸುಂದರ ವಿಡಿಯೋವೊಂದನ್ನು ಶೇರ್ ಮಾಡಿದ್ದು ಅದೀಗ ಭಾರೀ ವೈರಲ್ ಆಗಿದೆ.
ಗ್ರಾಮಾಂತರ ಪ್ರದೇಶವೊಂದರ ಕೊಳವೊಂದರಲ್ಲಿ ಗುಡ್ಡಗಳ ಪ್ರತಿಫಲನ ಬೀಳುತ್ತಿದ್ದು, ಅವುಗಳ ಹಿನ್ನೆಲೆಯಲ್ಲೇ ವಂದೇ ಭಾರತ್ ರೈಲು ಓಡುತ್ತಿರುವ ವಿಡಿಯೋ ಇದಾಗಿದೆ. ನೀರಿನ ಪ್ರತಿಫಲನದಲ್ಲಿ ಬಿಳಿ ಬಣ್ಣದ ಈ ರೈಲು ಅದ್ಭುತವಾಗಿ ಕಾಣುತ್ತಿದೆ.
ಟ್ರೈನ್ 18 ಎಂದೂ ಸಹ ಕರೆಯಲಾಗುವ ವಂದೇ ಭಾರತ್ ರೈಲುಗಳು ಎಲೆಕ್ಟ್ರಿಕ್ ಬಹು ಘಟಕಗಳ, ಸೆಮಿ-ಹೈಸ್ಪೀಡ್ ಇಂಟರ್ ಸಿಟಿ ರೈಲುಗಳಾಗಿವೆ. 100ಕಿಮೀ/ಗಂಟೆ ವೇಗ ತಲುಪಲು ಕೇವಲ 52 ಸೆಕೆಂಡ್ ತೆಗೆದುಕೊಳ್ಳುತ್ತವೆ ಈ ರೈಲುಗಳು. ಗಂಟೆಗೆ 220ಕಿಮೀ ವೇಗದಲ್ಲಿ ಸಂಚರಿಸಬಲ್ಲ ಸ್ಲೀಪರ್ ಅವತರಣಿಕೆಯ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಕಾರ್ಯಾಚರಣಾ ಸುರಕ್ಷತೆ ದೃಷ್ಟಿಯಿಂದ ವಂದೇ ಭಾರತ್ 2.0 ರೈಲುಗಳಿಗೆ ಕವಚ್ (ರೈಲುಗಳ ಅಫಘಾತ ತಡೆ ವ್ಯವಸ್ಥೆ) ಅಳವಡಿಸಲಾಗುವುದು.
ಬೇಡಿಕೆಯ ಮೇರೆಗೆ ವೈ-ಫೈ ಲಭ್ಯವಿರುವ ಈ ರೈಲಿನ ಪ್ರತಿ ಬೋಗಿಯಲ್ಲೂ 32 ಇಂಚಿನ ಸ್ಕ್ರೀನ್‌ಗಳಿದ್ದು, ಪ್ರಯಾಣಿಕರಿಗೆ ಮನರಂಜನೆ ಒದಗಿಸಲಿವೆ. ವಂದೇ ಭಾರತ್ 1.0 ರೈಲುಗಳಲ್ಲಿ 24 ಇಂಚಿನ ಪರದೆಗಳಿರಲಿವೆ. ಹಿಂದಿನ ಅವತರಣಿಕೆಗೆ ಹೋಲಿಸಿದಲ್ಲಿ ವಂದೇ ಭಾರತ್ 2.0 ರೈಲುಗಳು ಹೆಚ್ಚು ಪರಿಸರ ಸ್ನೇಹಿ ಸಹ ಆಗಿರಲಿವೆ.