ಶ್ರವಣ ಸಾಧನದ ಸಹಾಯದಿಂದ ತನ್ನ ಶ್ರವಣಶಕ್ತಿಯನ್ನು ಮರಳಿ ಪಡೆದ ಕೀನ್ಯಾದ ಹುಡುಗಿಯೊಬ್ಬಳು ಅನುಭವಿಸಿರುವ ಅಪಾರ ಸಂತೋಷದ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.
ಗುಡ್ ನ್ಯೂಸ್ ಮೂವ್ಮೆಂಟ್ ಹೆಸರಿನ ಇನ್ಸ್ಟಾಗ್ರಾಮ್ ಪುಟವು ಈ ವಿಡಿಯೋ ಹಂಚಿಕೊಂಡಿದೆ. ಹುಡುಗಿಯ ಅಮೂಲ್ಯವಾದ ಪ್ರತಿಕ್ರಿಯೆಗೆ ಹಾಗೂ ಬಾಲಕಿಯ ಮುಗ್ಧತೆಯು ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.
ನೆಸ್ತೈಹಾ ಎಂಬ 7 ವರ್ಷದ ಕೀನ್ಯಾದ ವಾಜಿರ್ ಪಟ್ಟಣಕ್ಕೆ ಸೇರಿದ ಬಾಲಕಿಯ ಕಥೆಯಿದು. ಬಾಲಕಿ ಮಗುವಾಗಿದ್ದಾಗಲೇ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಳು. ಈ ಕ್ಷಣದವರೆಗೂ ಅವಳು ಕಿವುಡಿಯಾಗಿಯೇ ಇದ್ದಳು. ಪುನಃ ತಾನು ಎಲ್ಲವನ್ನೂ ತನ್ನ ಕಿವಿಯಿಂದ ಕೇಳಬಲ್ಲೆ ಎಂದು ಆಕೆ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಈಕೆಯನ್ನು ಕುರ್ಚಿಯ ಮೇಲೆ ಕೂರಿಸಿದ ವ್ಯಕ್ತಿಯೊಬ್ಬ ಬಾಲಕಿಯ ಕಿವಿಯಲ್ಲಿ ಶ್ರವಣ ಸಾಧನ ಇರಿಸುತ್ತಾನೆ. ತನಗೆ ಏನು ಮಾಡುತ್ತಿದ್ದಾರೆ ಎನ್ನುವುದು ಈ ಬಾಲಕಿಗೆ ಗೊತ್ತಿರುವುದಿಲ್ಲ. ಆ ವ್ಯಕ್ತಿ ಆ ಸಾಧನ ಇರಿಸಿದ ಮೇಲೆ ಚಪ್ಪಾಳೆ ಹೊಡೆದಾಗ ಬಾಲಕಿ ತಿರುಗಿ ನೋಡುತ್ತಾಳೆ. ಅಲ್ಲಿದ್ದವರಲ್ಲಿ ಹರ್ಷೋದ್ಗಾರ. ತನಗೆ ಏನೆಲ್ಲಾ ಶಬ್ದಗಳು ಕೇಳಿಸುತ್ತಿವೆ ಎಂದು ತಿಳಿದಾಗ ಬಾಲಕಿ ಕಣ್ಣೀರು ಹಾಕುವ ದೃಶ್ಯ ಈ ವಿಡಿಯೋದಲ್ಲಿ ಇದೆ.