ಕೊರೋನಾ ವೈರಸ್ ಸಾಂಕ್ರಮಿಕದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತಿರುವ ನಡುವೆಯೇ, ಅದಾಗಲೇ ಬಳಸಿರುವ ಪಿಪಿಇ ಕಿಟ್‌ಗಳು ಹಾಗೂ ಗ್ಲೌವ್ಸ್‌ಗಳನ್ನು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಂಪನಿಯೊಂದು ತೊಳೆದು ಮರುಬಳಕೆಗೆ ಕಳುಹಿಸುತ್ತಿರುವ ಶಾಕಿಂಗ್ ವಿಡಿಯೋವೊಂದು ವೈರಲ್ ಆಗಿದೆ.
ಮಧ್ಯ ಪ್ರದೇಶದ ಬಡ್ಖೆರಾದಲ್ಲಿರುವ ಇಂಡೋ ಜಲ ಜೈವಿಕ ತ್ಯಾಜ್ಯ ನಿರ್ವಹಣೆ ಘಟಕವು ಏಕ-ಬಳಕೆಯ ಪಿಪಿಇ ಕಿಟ್‌ಗಳನ್ನು ಬಿಸಿನೀರಿನಲ್ಲಿ ತೊಳೆದು ಮತ್ತೊಮ್ಮೆ ಮಾರಾಟ ಮಾಡಲು ಸಜ್ಜುಗೊಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಆರೋಪಗಳ ಆಧಾರದ ಮೇಲೆ ಘಟನೆ ಸಂಬಂಧ ತನಿಖೆ ನಡೆಸಲು ಸ್ಥಳೀಯಾಡಳಿತ ಆದೇಶ ನೀಡಿದೆ. “ವಿಡಿಯೋ ತುಣುಕುಗಳು ವೈರಲ್ ಆದ ಬಳಿಕ ಘಟನೆ ಸಂಬಂಧ ತನಿಖೆ ನಡೆಸಲು ಆದೇಶಿಸಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡವೊಂದು ಸಂಬಂಧಪಟ್ಟ ಜೈವಿಕ-ತ್ಯಾಜ್ಯ ಘಟಕಕ್ಕೆ ಭೇಟಿ ಕೊಟ್ಟು ವಾಸಸ್ತವಾಂಶಗಳೇನು ಎಂದು ಅರಿತುಕೊಂಡಿದೆ” ಎಂದು ಸತ್ನಾದ ಉಪವಿಭಾಗದ ಮ್ಯಾಜಿಸ್ಟ್ರೇಟ್ ರಾಜೇಶ್ ಶಾಹಿ ತಿಳಿಸಿದ್ದಾರೆ.
2006-07ರಿಂದಲೂ ಚಾಲನೆಯಲ್ಲಿರುವ ಈ ಜೈವಿಕ ತ್ಯಾಜ್ಯ ಘಟಕವು ಇದುವರೆಗೂ ಒಂದೇ ಒಂದು ಬಾರಿಯೂ ಸರ್ಕಾರೀ ಮಾರ್ಗಸೂಚಿಗಳ ಅನುಸಾರ ವೈದ್ಯಕೀಯ ತ್ಯಾಜ್ಯವನ್ನು ಸ್ಮೆಲ್ಟಿಂಗ್ ಮಾಡಿಲ್ಲವೆಂದು ಅಕ್ಕಪಕ್ಕದ ಗ್ರಾಮಸ್ಥರು ಆರೋಪ ಮಾಡಿದ್ದಾರೆ.