ಸೆಲ್ಫೀ ಹುಚ್ಚಿಗೆ ಹಲರು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ, ಇನ್ನು ಕೆಲವರು ಇದೇ ಗೀಳಿಗಾಗಿ ಪ್ರಾಣಿ ಪಕ್ಷಿಗಳಿಗೆ ಚಿತ್ರಹಿಂಸೆ ಕೊಡುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ರಸ್ತೆ ದಾಟಲು ಬಂದ ಆನೆಯ ಜತೆ ಸೆಲ್ಫೀ ತೆಗೆದುಕೊಳ್ಳುವ ಉದ್ದೇಶದಿಂದ ಅದಕ್ಕೆ ಹೋಗಲು ಬಿಡದೇ ಒಂದಿಷ್ಟು ಮಂದಿ ಕಾಟ ಕೊಡುತ್ತಿದ್ದಾರೆ. ಆನೆ ರಸ್ತೆ ದಾಟಲು ಹರಸಾಹಸ ಪಡುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.
ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಸುರೇಂದರ್ ಮೆಹ್ರಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ಜನರ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗೆ ಈ ರೀತಿ ಅಡ್ಡಿ ಪಡಿಸುವುದು ಸರಿಯಲ್ಲ ಎಂದಿರುವ ಅವರು, ಒಂದು ವೇಳೆ ಆನೆ ಆಕ್ರೋಶಗೊಂಡರೆ ಅಲ್ಲಿದ್ದವರ ಜೀವಕ್ಕೆ ಅಪಾಯ. ಇಂಥ ಅಪಾಯ ಎದುರಿಸುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಅದೃಷ್ಟವಶಾತ್ ಈ ವಿಡಿಯೋದಲ್ಲಿ ಆನೆ ಮನುಷ್ಯರಿಗೆ ಏನೂ ಮಾಡಲಿಲ್ಲ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಹೀಗೆ ಆಗುವುದಿಲ್ಲ. ಅದೇ ಇನ್ನೊಂದೆಡೆ ಮೂಕ ಪ್ರಾಣಿಗಳಿಗೆ ಈ ರೀತಿ ಹಿಂಸೆ ನೀಡುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.