ಟೋಕಿಯೋ ಒಲಿಂಪಿಕ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಟೆಲಿಫೋನ್ ಕರೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಿಟನ್ ವಿರುದ್ಧ ಕಠಿಣ ಹೋರಾಟ ನಡೆಸಿದ್ರೂ ಸಹ ಭಾರತ 3-4 ಅಂತರದಲ್ಲಿ ಪರಭಾವಗೊಳ್ಳುವ ಮೂಲಕ ಕಂಚಿನ ಪದಕದಿಂದ ವಂಚಿತವಾಯಿತು. ಪ್ರಧಾನಿ ಮೋದಿ ಜೊತೆ ಮಾತನಾಡುವ ವೇಳೆ ಮಹಿಳಾ ತಂಡದ ಆಟಗಾರರು ಭಾವುಕರಾದ್ರು.
ಟೀಂ ಇಂಡಿಯಾ ಹಾಕಿ ಮಹಿಳಾ ತಂಡವು ಸೆಮಿಫೈನಲ್ಗೆ ಎಂಟ್ರಿ ಕೊಡವ ಮೂಲಕವೇ ಇತಿಹಾಸವನ್ನು ಸೃಷ್ಟಿಸಿತ್ತು. ಆದರೆ ಪದಕವೊಂದು ದಕ್ಕುತ್ತಿದ್ದರೆ ಈ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಕಂಚಿನ ಪದಕದಿಂದ ಹಾಕಿ ಮಹಿಳಾ ತಂಡ ವಂಚಿತವಾಗುತ್ತಿದ್ದಂತೆ ಕರೆ ಮಾಡಿದ ಪ್ರಧಾನಿ ಮೋದಿ ಆಟಗಾರರಿಗೆ ಸಾಂತ್ವನ ಹೇಳಿದ್ರು. ಅಲ್ಲದೇ ನೀವೆಲ್ಲರೂ ನವ ಭಾರತಕ್ಕೆ ಸ್ಪೂರ್ತಿಯಾಗಿದ್ದೀರಿ ಎಂದು ಕೊಂಡಾಡಿದ್ದಾರೆ.
ಸಂಭಾಷಣೆಯ ವೇಳೆ ಆಟಗಾರರು ಭಾವುಕರಾಗಿದ್ದನ್ನು ಗಮನಿಸಿದ ಪ್ರಧಾನಿ ಮೋದಿ, ಅಳೋದನ್ನು ನಿಲ್ಲಿಸಿ. ನಿಮ್ಮ ಅಳು ನನಗೆ ಕೇಳಿಸುತ್ತಿದೆ. ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ. ಎಷ್ಟೋ ದಶಕಗಳ ಬಳಿಕ ಭಾರತದ ಗುರುತಾದ ಹಾಕಿ ಆಟವು ನಿಮ್ಮೆಲ್ಲರ ಪರಿಶ್ರಮದ ಫಲವಾಗಿ ಮತ್ತೊಮ್ಮೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಸಾಂತ್ವನ ಹೇಳಿದ್ರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದರಲ್ಲಿ ಪ್ರಧಾನಿ ಮೋದಿ ಜೊತೆ ಮಹಿಳಾ ಆಟಗಾರರು ಫೋನ್ ಸಂಭಾಷಣೆ ನಡೆಸುತ್ತಿರೋದನ್ನ ಕಾಣಬಹುದಾಗಿದೆ.