ಹೈದರಾಬಾದ್‌ನ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದ ಸ್ನೇಹಿತರ ಗುಂಪೊಂದು ತಮ್ಮ ಚಿಕನ್ ಬಿರಿಯಾನಿಯಲ್ಲಿ ಅರ್ಧ ಸುಟ್ಟ ಸಿಗರೇಟ್ ತುಂಡನ್ನು ಕಂಡು ಆಘಾತಗೊಂಡಿದ್ದಾರೆ. ಅಲ್ಲದೇ ಇದರ ವಿಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಘಟನೆಯು ಹೈದರಾಬಾದ್‌ನ ಪ್ರಸಿದ್ಧ ರೆಸ್ಟೋರೆಂಟ್ ಬವಾರಾಚಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಇದು ಆಹಾರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಘಟನೆಯ ವೀಡಿಯೋವನ್ನು ನವೆಂಬರ್ 25 ರಂದು ವಿನೀತ್ ಕೆ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಅತಿಥಿಗಳ ಗುಂಪು ಕುಳಿತಿರುವುದನ್ನು ಕಾಣಬಹುದು. ಅವರ ಮುಂದೆ ಅರ್ಧ ತಿಂದ ಆಹಾರವಿದೆ. ಅವರಲ್ಲಿ ಒಬ್ಬರು ಬಿರಿಯಾನಿಯಲ್ಲಿದ್ದ ಸಿಗರೇಟ್ ತುಂಡನ್ನು ತೋರಿಸುತ್ತಾರೆ. ಉಳಿದವರು ಕೋಪದಿಂದ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕರೆದಿದ್ದಾರೆ.
ವೀಡಿಯೊ ಮುಂದುವರಿದಂತೆ, ಪುರುಷರು ತಮ್ಮ ದೂರು ಹೇಳುವಾಗ ಸಿಬ್ಬಂದಿ ಸುತ್ತುವರೆದ ಕಾರಣ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಬಿಸಿ ಬಿಸಿ ಚರ್ಚೆ ಇತರೆ ಅತಿಥಿಗಳ ಗಮನ ಸೆಳೆದಿದ್ದು, ಅವರೂ ಕೂಡಾ ಬಿರಿಯಾನಿಯಲ್ಲಿನ ಸಿಗರೇಟ್ ತುಂಡನ್ನು ಕಂಡು ಆಘಾತ ವ್ಯಕ್ತಪಡಿಸಿದ್ದಾರೆ.
ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರನು “ಇದಕ್ಕಾಗಿಯೇ ನಾನು ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತೇನೆ” ಎಂದರೆ, ಮತ್ತೊಬ್ಬರು ಹಾಸ್ಯಮಯವಾಗಿ “ಹೆಚ್ಚುವರಿ ರುಚಿಗಾಗಿ ಇದನ್ನು ಸೇರಿಸಿದ್ದಾರೆ” ಎಂದು ಬರೆದಿದ್ದಾರೆ.
— Vineeth K (@DealsDhamaka) November 25, 2024