ಸ್ಕಾಟ್ಲೆಂಡ್‌ನಿಂದ ನ್ಯೂಯಾರ್ಕ್ ಗೆ ಹೊರಟಿದ್ದ ಡೆಲ್ಟಾ ಏರ್‌ಲೈನ್ಸ್ ವಿಮಾನವನ್ನು ಶುಕ್ರವಾರ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದ ರೆಕ್ಕೆಯ ಸುತ್ತಲೂ ಜ್ವಾಲೆಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನ್ಯೂಯಾರ್ಕ್ ಗೆ ತೆರಳುತ್ತಿದ್ದ DAL209 ವಿಮಾನದಲ್ಲಿ ಎಂಜಿನ್ ಸಮಸ್ಯೆ ನಂತರ ಪ್ರೆಸ್‌ವಿಕ್ ನಲ್ಲಿ ಇಳಿಯಲು ಮಾರ್ಗ ಬದಲಿಸಲಾಯಿತು. ಕ್ಯಾಬಿನ್ ಒಳಗಿನಿಂದ ಚಿತ್ರೀಕರಿಸಲಾದ ವಿಡಿಯೋದಲ್ಲಿ ವಿಮಾನದ ರೆಕ್ಕೆಗಳಿಂದ ಬೆಂಕಿಯ ಜ್ವಾಲೆಗಳು ಕಂಡು ಬಂದಿವೆ. ಪ್ರಯಾಣಿಕರು ಭಯಭೀತರಾಗುವುದನ್ನು ಹಿನ್ನೆಲೆಯಲ್ಲಿ ಕೇಳಬಹುದು.
ಅದೇ ವಿಮಾನದಲ್ಲಿ ಇದ್ದ ಬಿಬಿಸಿ ಪತ್ರಕರ್ತೆ ಲಾರಾ ಪೆಟ್ಟಿಗ್ರೂ, ವಿಮಾನವು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಶಬ್ದವನ್ನು ಹೋಲುವ ದೊಡ್ಡ ಎಂಜಿನ್ ಶಬ್ದ ಕೇಳಿ ಬಂತು ನಂತರ ಜ್ವಾಲೆ ಕಾಣಿಸಿತು ಎಂದು ತಿಳಿಸಿದ್ದಾರೆ.
ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದಾಗ ಅಗ್ನಿಶಾಮಕ ಟ್ರಕ್ ಗಳು ಮತ್ತು ಸಿಬ್ಬಂದಿ ನಮ್ಮ ಕಡೆಗೆ ಧಾವಿಸುತ್ತಿರುವುದನ್ನು ನೋಡಿದ್ದೇವೆ. ನಮ್ಮ ಎಲ್ಲಾ ವಸ್ತುಗಳನ್ನು ಬಿಟ್ಟು ನಾವು ಸಾಧ್ಯವಾದಷ್ಟು ಬೇಗ ಇಳಿಯಲು ನಮಗೆ ತಿಳಿಸಲಾಯಿತು ಎಂದು ಹೇಳಿದ್ದಾರೆ.
ಡೆಲ್ಟಾದ ವಕ್ತಾರರು ವಿಮಾನದ ಎರಡು ಎಂಜಿನ್‌ಗಳಲ್ಲಿ ಒಂದರಲ್ಲಿ ಯಾಂತ್ರಿಕ ಸಮಸ್ಯೆ ಇದೆ ಎಂದು ದೃಢಪಡಿಸಿದ್ದು, ಡೆಲ್ಟಾ ಫ್ಲೈಟ್ 209 ಎಡಿನ್ ಬರ್ಗ್ ನಿಂದ ನ್ಯೂಯಾರ್ಕ್-ಜೆಎಫ್‌ಕೆಗೆ ಸುರಕ್ಷಿತವಾಗಿ ಗ್ಲ್ಯಾಸ್ಗೋ ಪ್ರೆಸ್ ವಿಕ್ ಏರ್‌ಪೋರ್ಟ್‌ಗೆ ತಿರುಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಅನಾನುಕೂಲತೆಗಾಗಿ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ ಮತ್ತು ಅವರನ್ನು ಎಡಿನ್‌ಬರ್ಗ್ ಮೂಲಕ ಅವರ ಅಂತಿಮ ಸ್ಥಳಗಳಿಗೆ ತಲುಪಿಸಲು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಲಾಗಿದೆ.