ಚಂಡೀಗಢ: ಮಾಡುವ ಕೆಲಸ ಎಂಥದ್ದೇ ಇರಲಿ, ಅದು ಎಷ್ಟು ಕಷ್ಟವೇ ಇರಲಿ, ಸಮಸ್ಯಾತ್ಮಕವೇ ಇರಲಿ ಅದರ ಮೇಲೆ ಪ್ರೀತಿ ಇದ್ದರೆ ಅಷ್ಟೇ ಖುಷಿಯಿಂದ ನಿಭಾಯಿಸಬಲ್ಲ ತಾಕತ್ತು ಯಾರಿಗೇ ಆಗಲಿ ಇದೆ. ತಮ್ಮ ಕೆಲಸದ ಮೇಲೆ ಶ್ರದ್ಧೆ, ಭಕ್ತಿ ಇದ್ದರೆ ಅದನ್ನು ಪ್ರೀತಿಸುವುದು ಕಷ್ಟದ ಕೆಲಸವೇನಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್.
ಪೊಲೀಸ್ ಇಲಾಖೆಗಳು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಜಾಗೃತಿಯನ್ನು ವಿಶಿಷ್ಟ ರೀತಿಯಲ್ಲಿ ಹರಡುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. ಮೀಮ್‌ಗಳಿಂದ ಹಿಡಿದು ಡ್ಯಾನ್ಸ್ ಕ್ಲಿಪ್‌ಗಳವರೆಗೆ ಹಲವಾರು ಬಗೆಯ ಅನುಕರಣೆಗಳೂ ದಿನನಿತ್ಯವೂ ಕಾಣಸಿಗುತ್ತದೆ. ಅದಕ್ಕಿಂತ ಸ್ವಲ್ಪ ಭಿನ್ನವಾಗಿ ಚಂಡೀಗಢದ ಪೋಲೀಸ್ ಒಬ್ಬರು ತಮ್ಮ ಕರ್ತವ್ಯದ ಮೇಲಿನ ಕಾಳಜಿ, ಪ್ರೀತಿಯನ್ನು ಅಪರೂಪದ ರೀತಿಯಲ್ಲಿ ವ್ಯಕ್ತಪಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಗಾಯಕ ದಲೇರ್ ಮೆಹೆಂದಿ ಅವರ ಸಾಂಪ್ರದಾಯಿಕ ಹಾಡಾಗಿರುವ ‘ಬೋಲೋ ತಾರಾ ರಾ’ದಲ್ಲಿ ಹಾಡಿನ ಧಾಟಿಯಲ್ಲಿಯೇ ಟ್ರಾಫಿಕ್ ನಿಯಮಗಳನ್ನು ಹೇಳುವ ಮೂಲಕ ಸಾಮಾಜಿಕ ಜಾಲತಾಣದ ಹೀರೋ ಎನಿಸಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.