
ಕಾನ್ಪುರದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಹೀಗೆ ಪ್ರಚಾರ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರಿಗೆ ಒಳ್ಳೆ ಹಾಸ್ಯದ ಸರಕಾಗಿದೆ.
ಸ್ನಾನ ಮಾಡುತ್ತಿದ್ದ ಮತದಾರರೊಬ್ಬರ ಬಳಿ ತೆರಳಿದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ, “ಎಲ್ಲವೂ ಕ್ಷೇಮವೇ? ನಿಮ್ಮ ಮನೆಯ ನಿರ್ಮಾಣ ಯಶಸ್ವಿಯಾಗಿ ಆಗಿದೆಯೇ? ನಿಮಗೆ ರೇಷನ್ ಕಾರ್ಡ್ ಸಿಕ್ಕಿದೆಯೇ?” ಎಂದು ಕೇಳಿದ್ದಾರೆ.
ಈ ವೇಳೆ ಸೋಪು ಬಳಿದುಕೊಳ್ಳುತ್ತಿದ್ದ ಮತದಾರ, “ಹೌದು ಹೌದು,” ಎಂದಿದ್ದಾರೆ. ಈ ಚಿತ್ರವನ್ನು ಬಿಜೆಪಿ ಶಾಸಕ ಇನ್‌ಸ್ಟಾಗ್ರಾಂನಲ್ಲಿಯೂ ಶೇರ್ ಮಾಡಿಕೊಂಡಿದ್ದಾರೆ.
“ಫಲಾನುಭವಿಯೊಬ್ಬರ ಮನೆಗೆ ತೆರಳಿದ ನಾನು ಗೃಹ ನಿರ್ಮಾಣ ಯೋಜನೆಯಡಿ ಯಶಸ್ವಿಯಾಗಿ ನಿರ್ಮಿಸಲಾದ ಮನೆಯ ವಿಚಾರವಾಗಿ ಅವರಿಗೆ ಶುಭಾಶಯ ತಿಳಿಸಿದೆ. ಕಮಲದ ಚಿಹ್ನೆ ಒತ್ತುವ ಮೂಲಕ ನನ್ನನ್ನು ಶಾಸಕರಾಗಿ ಮತ್ತೊಮ್ಮೆ ಆಯ್ಕೆ ಮಾಡಿ ಎಂದು ನಾನು ಅವರಲ್ಲಿ ವಿನಂತಿಸಿಕೊಂಡೆ,” ಎಂದಿದ್ದಾರೆ ಶಾಸಕ.
ಫೆಬ್ರವರಿ 10ರಿಂದ ಮಾರ್ಚ್ 7ರ ನಡುವೆ ಏಳು ಹಂತಗಳಲ್ಲಿ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ನಡೆಯಲಿದೆ.