ಬ್ರೆಜಿಲಿಯನ್ ವ್ಯಕ್ತಿಯೊಬ್ಬರು ತಾವು ನಿರ್ಮಿಸಿದ ಹೆಲಿಕಾಪ್ಟರ್ ಗಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಈ ಹೆಲಿಕಾಪ್ಟರ್ ಅನ್ನು ನಿರ್ಮಿಸಲು ಸ್ಕ್ರ್ಯಾಪ್ ಮಾಡಿದ ಕಾರುಗಳ ಭಾಗಗಳನ್ನು ಬಳಸಿ, ಟೇಕ್ ಆಫ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಾದ್ಯಂತ ಹೆಲಿಕಾಪ್ಟರ್ ವಿಡಿಯೋ ವೈರಲ್ ಆಗಿದೆ. ಈತ ತಿರಸ್ಕರಿಸಿದ ಕಾರಿನ ಭಾಗಗಳಿಂದ ಮಾಡಿದ ಮತ್ತು ಫೋಕ್ಸ್‌ವ್ಯಾಗನ್ ಬೀಟಲ್‌ನ ಎಂಜಿನ್‌ನಿಂದ ಹೆಲಿಕಾಪ್ಟರ್ ಅನ್ನು ಟೇಕ್ ಆಫ್ ಮಾಡಿದ್ದಾನೆ. ಕಾಪ್ಟರ್ ಸರಾಗವಾಗಿ ಟೇಕ್ ಆಫ್ ಆಗಿದ್ದನ್ನು ಕಂಡು ಜನರು ಅಚ್ಚರಿಗೊಳಗಾಗಿದ್ದಾರೆ.
ಸ್ಥಳೀಯ ಸುದ್ದಿವಾಹಿನಿ ಪ್ರಕಾರ, ಹೆಲಿಕಾಪ್ಟರ್‌ನಲ್ಲಿ ಸವಾರಿ ಮಾಡಲು ಬಯಸಿದ ಜೊವೊ ಡಯಾಸ್ ನಗರದ ನಿವಾಸಿಯಾಗಿರುವ ಜೆನೆಸಿಸ್ ಗೋಮ್ಸ್ ಎಂಬುವವರು ಈ ವಿಶಿಷ್ಟ ಕಾಪ್ಟರ್ ಅನ್ನು ವಿನ್ಯಾಸಗೊಳಿಸಿದ್ದಾರೆ ಹಾಗೂ ತಯಾರಿಸಿದ್ದಾರೆ. ಈತ ತಾನು ನಿರ್ಮಿಸಿದ ಕಾಪ್ಟರ್ ಅನ್ನು ನೆಲದಿಂದ ಮೇಲಕ್ಕೆ ಟೇಕ್ ಆಫ್ ಮಾಡುತ್ತಿದ್ದಂತೆ ನೋಡಲು ಜನಸಾಗರವೇ ಹರಿದುಬಂದಿದೆ. ಅದ್ಭುತ ದೃಶ್ಯ ಕಂಡು ನೆರೆದಿದ್ದವರು ಬೆರಗಾಗಿದ್ದಾರೆ.
ಜೆನೆಸಿಸ್ ಗೋಮ್ಸ್ ಅವರು ಬಾಲ್ಯದಿಂದಲೂ ವಾಯುಯಾನದಲ್ಲಿ ಆಸಕ್ತಿ ಹೊಂದಿದ್ದರಂತೆ. ಕಾಪ್ಟರ್ ನಿರ್ಮಾಣ ಮಾಡಬೇಕೆನ್ನುವುದು ಅವರದ್ದು ಕನಸಾಗಿತ್ತು. ಇದೀಗ ಆ ಕನಸು ನನಸಾಗಿದ್ದು, ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ಹೆಲಿಕಾಪ್ಟರ್ ಕಾರು ಮಾತ್ರವಲ್ಲದೆ ಸ್ಕ್ರ್ಯಾಪ್ ಮಾಡಿದ ಮೋಟಾರ್ ಸೈಕಲ್, ಟ್ರಕ್ ಮತ್ತು ಬೈಸಿಕಲ್ ನ ಭಾಗಗಳನ್ನು ಕೂಡ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.