ಹೈದರಾಬಾದ್: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಂಸದ ರಾಹುಲ್ ಗಾಂಧಿ ಪುಟ್ಟ ಬಾಲಕನೊಬ್ಬನಿಗೆ ಕರಾಟೆಯನ್ನು ಹೇಳಿಕೊಟ್ಟಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಕೆಲವು ಕ್ಷಣವನ್ನು ಕಾಂಗ್ರೆಸ್ ಹಂಚಿಕೊಂಡಿದ್ದು ಅದರಲ್ಲಿ ಚಿಕ್ಕ ಬಾಲಕನೊಬ್ಬ ಕರಾಟೆ ಪ್ರದರ್ಶಿಸುವಾಗ ರಾಹುಲ್ ಆ ಬಾಲಕನ ಕರಾಟೆ ಪಟ್ಟುಗಳನ್ನು ಸರಿಪಡಿಸುತ್ತಿರುವುದನ್ನು ನೋಡಬಹುದಾಗಿದೆ.
ಜಪಾನ್‍ನ ಸಮರ ಕಲೆ ಐಕಿಡೊದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿರುವ ರಾಹುಲ್ ಗಾಂಧಿ ಅವರು, ಕರಾಟೆ ಇಷ್ಟಪಡುವ ಮಕ್ಕಳ ಗುಂಪಿನೊಂದಿಗೆ ಕೆಲ ಕ್ಷಣಗಳನ್ನು ಕಳೆದಿರುವುದಾಗಿ ಅದರಲ್ಲಿ ತಿಳಿಸಲಾಗಿದೆ.
23-ಸೆಕೆಂಡುಗಳಿರುವ ವೀಡಿಯೋದಲ್ಲಿ ಪುಟ್ಟ ಬಾಲಕನಿಗೆ ಕರಾಟೆ ಪಂಚ್‍ಗಳನ್ನು ಹೇಗೆ ಹೊಡೆಯಬೇಕೆಂದು ಕಲಿಸುತ್ತಿರುವುದು ಮತ್ತು ಬಾಲಕ ತಪ್ಪು ಮಾಡಿದಾಗ ಸರಿಪಡಿಸುವುದನ್ನು ನೋಡಬಹುದಾಗಿದೆ.
“ತಂತ್ರವು ತಪ್ಪಾಗಿದ್ದರೆ ದೇಶವು ವಿನಾಶದ ಹಾದಿಗೆ ಹೋಗುತ್ತದೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಅವರು ಮಗುವಿಗೆ ಸರಿಯಾದ ತಂತ್ರವನ್ನು ತೋರಿಸಿಕೊಟ್ಟಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ.