ಮೈಕ್ರೋಸಾಫ್ಟ್ ಸಹ-ಸ್ಥಾಪಕ ಬಿಲ್ ಗೇಟ್ಸ್ ಲಂಡನ್‌ನಲ್ಲಿ ಸ್ವಯಂ ಚಾಲಿತ ಕಾರಿನಲ್ಲಿ ಪಯಣಿಸಿದ್ದಾರೆ. ತಮ್ಮ ಈ ಪ್ರವಾಸದ ವೇಳೆಯ ವಿಡಿಯೋ ಶೇರ್ ಮಾಡಿದ ಗೇಟ್ಸ್, ಕೃತಕ ಬುದ್ಧಿಮತ್ತೆ ಬಲದಿಂದ ಸ್ವಯಂ ಚಾಲನೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಬ್ರಿಟೀಷ್ ಕಂಪನಿ ವೇಯ್ವ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಯೂಟ್ಯೂಬ್‌ನಲ್ಲಿ ತಮ್ಮ ಈ ಸ್ವಯಂ ಚಾಲಿತ ಕಾರಿನ ಅನುಭವದ ವಿಡಿಯೋ ಶೇರ್ ಮಾಡಿದ್ದಾರೆ ಗೇಟ್ಸ್. ಈ ಕಾರಿನಲ್ಲಿ ಪಯಣ ಮಾಡುತ್ತಾ, ದಾರಿ ಮಧ್ಯದಲ್ಲಿ ಮೀನು ಮತ್ತು ಚಿಪ್ಸ್ ಕುರುಕಲು ಸವಿದ ಗೇಟ್ಸ್‌ರನ್ನು ವಿಡಿಯೋದಲ್ಲಿ ನೋಡಬಹುದು. ಸದ್ಯದ ಮಟ್ಟಿಗೆ ಈ ಕಾರು ಕೆಲ ಆಯ್ದ ಮ್ಯಾಪ್ ಬೀದಿಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.
“ಬಹಳಷ್ಟು ಸ್ವಯಂಚಾಲಿತ ವಾಹನಗಳು ಕೇವಲ ತಮ್ಮ ಸಿಸ್ಟಂನಲ್ಲಿ ಲೋಡ್ ಮಾಡಲಾದ ಬೀದಿಗಳಲ್ಲಿ ಮಾತ್ರವೇ ಚಲಿಸುತ್ತವೆ. ಆದರೆ ವೇಯ್ವ್‌ನ ಈ ಕಾರು ಖುದ್ದು ಒಬ್ಬ ವ್ಯಕ್ತಿಯಂತೆಯೇ ಕಾರ್ಯ ನಿರ್ವಹಿಸುತ್ತದೆ,” ಎಂದು ಗೇಟ್ಸ್ ಇದೇ ವಿಡಿಯೋದಲ್ಲಿ ವಿವರಣೆ ನೀಡಿದ್ದಾರೆ.