ತನ್ನ ದುರ್ನಡತೆ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಸಂತ್ರಸ್ತರೊಬ್ಬರು ದೂರು ಕೊಟ್ಟು, ಆ ಪ್ರಕರಣ ವಿಚಾರಣೆಗೆ ಬರುತ್ತಲೇ ಕುಪಿತಗೊಂಡ ಪೊಲೀಸ್ ಪೇದೆಯೊಬ್ಬ ತನ್ನ ಅಂಗಿ ಹರಿದುಕೊಂಡು ರಂಪಾಟವಾಡಿದ ಘಟನೆ ಮಧ್ಯ ಪ್ರದೇಶದ ಭಿಂಡ್‌ನಲ್ಲಿ ಜರುಗಿದೆ.
ದೂರುದಾರನ ವಿರುದ್ಧ ಆಪಾದನೆ ಮಾಡಿದ ಪೇದೆ ಸುಲ್ತಾನ್ ಸಿಂಗ್, “ನನ್ನ ತಂದೆಗೆ ಸೇರಿದ ಎರಡು ಭಿಗಾ ಜಮೀನನ್ನು ಆತ ಮಾರಾಟ ಮಾಡಿದ್ದಲ್ಲದೇ ನನ್ನ ನಿವಾಸಕ್ಕೆ ಬಂದು ನನ್ನನ್ನು ಅಪಹರಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆತ ನನ್ನನ್ನೇ ಅಪಹರಣ ಮಾಡಿದರೆ ನನಗೆ ಈ ಸಮವಸ್ತ್ರದ ಮೇಲೆಯೇ ನಾಚಿಕೆಯಾಗುತ್ತಿದೆ. ನೀವು ಈ ವಿಚಾರವನ್ನು ಸರಿ ಮಾಡುವುದು ಬಿಟ್ಟು ಪೊಲೀಸನನ್ನೇ ಪ್ರಶ್ನಿಸುತ್ತಿರುವಿರಿ” ಎಂದಿದ್ದಾನೆ.
ಪ್ರಕರಣದ ವಿವರ : ಭಿಂಡ್ ನಗರದಲ್ಲಿ ಪೋಸ್ಟಿಂಗ್‌ನಲ್ಲಿರುವ ಸುಲ್ತಾನ್ ಸಿಂಗ್ ಉತ್ತರ ಪ್ರದೇಶದ ಸಂದೀಪ್ ರಾಥೋರ್ ಎಂಬಾತನಿಂದ 1.5 ಲಕ್ಷ ರೂ. ಗಳನ್ನು ಪಡೆದಿದ್ದ. ತನ್ನ ಹಣವನ್ನು ಹಿಂದಿರುಗಿಸಲು ಸಂದೀಪ್ ಪದೇ ಪದೇ ಕೇಳುತ್ತಲೇ ಇದ್ದರೂ ಸುಲ್ತಾನ್ ಸಿಂಗ್ ಇದಕ್ಕೆ ಕ್ಯಾರೇ ಎನ್ನುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಲ ದಿನಗಳ ಹಿಂದೆ ಪೇದೆ ಸುಲ್ತಾನ್, ಸಂದೀಪ್‌ರನ್ನು ಠಾಣೆಗೆ ಬಂದು ದುಡ್ಡು ವಾಪಸ್ ಪಡೆಯುವಂತೆ ಹೇಳಿದ್ದಾನೆ. ಸಂದೀಪ್ ಠಾಣೆಗೆ ಬರುತ್ತಲೇ ಆತನಿಗೆ ಸುಲ್ತಾನ್ ಥಳಿಸಿ, ಮೊಬೈಲ್ ಕಿತ್ತುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಈ ಘಟನೆ ಬಳಿಕ ಸಂದೀಪ್ ನೇರವಾಗಿ ಎಸ್‌ಪಿ ಕಾರ್ಯಾಲಯಕ್ಕೆ ಭೇಟಿ ಕೊಟ್ಟಿದ್ದು, ಭಿಂಡ್ ಡಿಎಸ್ಪಿ ಅರವಿಂದ್ ಶಾಗೆ ಈ ವಿಚಾರವಾಗಿ ದೂರು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಸುಲ್ತಾನ್‌ನನ್ನು ವಿಚಾರಣೆಗೆ ಕರೆಯಿಸಲಾಗಿದೆ.