ಚಂಡಮಾರುತ ಪೀಡಿತ ಟೆಕ್ಸಾಸ್‌ನ ಡಲ್ಲಾಸ್ ಫೋರ್ಟ್ ವರ್ತ್ ವಿಮಾನ ನಿಲ್ದಾಣದಲ್ಲಿ ಬಲವಾದ ಗಾಳಿಯು ಅಮೇರಿಕನ್ ಏರ್‌ಲೈನ್ಸ್ ವಿಮಾನವನ್ನು ಅಲುಗಾಡಿಸಿ ದೂರ ತಳ್ಳಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ 90,000 ಪೌಂಡ್ ತೂಕದ ಬೋಯಿಂಗ್ ವಿಮಾನವನ್ನ ಭಾರೀ ಗಾಳಿ ತಿರುಗುವಂತೆ ಮಾಡಿದೆ.
ವೈರಲ್ ವೀಡಿಯೊದಲ್ಲಿ, ತೀವ್ರ ಚಂಡಮಾರುತವು ವಿಮಾನವನ್ನ ಲೋಡಿಂಗ್ ಬ್ರಿಡ್ಜ್ ನಿಂದ ದೂರ ಸರಿಸುವುದನ್ನು ಕಾಣಬಹುದು. ವಿಮಾನದ ಪಕ್ಕದಲ್ಲಿ ನಿಂತಿದ್ದ ಬ್ಯಾಗೇಜ್ ಟ್ರಕ್ ಅನ್ನು ಸಹ ವೀಡಿಯೊ ಸೆರೆಹಿಡಿದಿದೆ. ಈ ವೇಳೆ ವಿಮಾನವು ಟ್ರಕ್‌ಗೆ ಡಿಕ್ಕಿಯಾಗಲಿಲ್ಲ.
ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ “ಮಂಗಳವಾರ ಬೆಳಿಗ್ಗೆ ತೀವ್ರ ಹವಾಮಾನ ವೈಪರೀತ್ಯದ ಸಮಯದಲ್ಲಿ ಅಮೇರಿಕನ್ ಏರ್‌ಲೈನ್ಸ್ 737-800 DFW ವಿಮಾನ ನಿಲ್ದಾಣದಲ್ಲಿ ತನ್ನ ಗೇಟ್‌ನಿಂದ ದೂರ ತಳ್ಳಲ್ಪಟ್ಟಿದೆ. ತೀವ್ರ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ, ಡಲ್ಲಾಸ್-ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಹೆಚ್ಚಿನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದು 700 ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರಿದೆ” ಎಂದು ತಿಳಿಸಲಾಗಿದೆ.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿರುವ ವಿಡಿಯೋ 1.9 ಮಿಲಿಯನ್ ವೀಕ್ಷಣೆ ಸಂಗ್ರಹಿಸಿದೆ. ಚಂಡಮಾರುತದಿಂದ ಮಂಗಳವಾರ ರಾತ್ರಿ ಟೆಕ್ಸಾಸ್‌ನಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 6,00,000 ಕ್ಕೂ ಹೆಚ್ಚು ಜನರು ವಿದ್ಯುತ್ ಕಡಿತದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.