ಅಮೆರಿಕದ ನಾಲ್ವರು ಮಹಿಳಾ ರಾಜತಾಂತ್ರಿಕ ಪ್ರತಿನಿಧಿಗಳು ತಮ್ಮ ಬುಲೆಟ್ ಪ್ರೂಫ್ ವಾಹನಗಳನ್ನು ಬಿಟ್ಟು, ದೆಹಲಿಯ ರಸ್ತೆಗಳಲ್ಲಿ ಆಟೋರಿಕ್ಷಾಗಳನ್ನು ಓಡಿಸಿ ಗಮನ ಸೆಳೆದಿದ್ದಾರೆ.
ಆನ್ ಎಲ್ ಮೇಸನ್, ರುತ್ ಹೋಲ್ಬರ್ಗ್, ಶರೀನ್ ಜೆ ಕಿಟ್ಟರ್ಮ್ಯಾನ್ ಮತ್ತು ಜೆನ್ನಿಫರ್ ಬೈವಾಟರ್ಸ್ ಈ ಆಟೋ ಸವಾರಿ ಮಾಡಿದವರಾಗಿದ್ದು, ಸಾಕಷ್ಟು ಎಂಜಾಯ್ ಮಾಡಿದ್ದಾರೆ.
ಆಟೋ ರಿಕ್ಷಾದಲ್ಲಿ ಭಾರತ ಮತ್ತು ಅಮೇರಿಕಾದ ಧ್ವಜಗಳನ್ನು ಹಾಕಲಾಗಿತ್ತು. ರಾಜತಾಂತ್ರಿಕ ಪ್ರತಿನಿಧಿ ಆನ್ ಎಲ್ ಮೇಸನ್ ಅವರು ಪಾಕಿಸ್ತಾನದಲ್ಲಿ ಆಟೋರಿಕ್ಷಾವನ್ನು ಮೊದಲು ನೋಡಿದ್ದು, ಅದರ ವಿನ್ಯಾಸದಿಂದ ಪ್ರಭಾವಿತರಾದರು. ಅವರು ಭಾರತಕ್ಕೆ ಬಂದ ತಕ್ಷಣ ತನಗಾಗಿ ಒಂದನ್ನು ಖರೀದಿಸಿದ್ದರು.
ನಾನು ಪಾಕಿಸ್ತಾನದಲ್ಲಿದ್ದಾಗ ಶಸ್ತ್ರಸಜ್ಜಿತ ವಾಹನಗಳಲ್ಲಿದ್ದೆ, ಆದರೆ ಯಾವಾಗಲೂ ರಸ್ತೆಯಲ್ಲಿ ಆಟೋರಿಕ್ಷಾಗಳು ಹೋಗುವುದನ್ನು ನೋಡುತ್ತಿದ್ದೆ ಮತ್ತು ಆಟೋರಿಕ್ಷಾದಲ್ಲಿ ಓಡಾಡಲು ಬಯಸುತ್ತಿದ್ದೆ. ಹಾಗಾಗಿ ನಾನು ಭಾರತಕ್ಕೆ ಬಂದಾಗ ಅವಕಾಶ ಸಿಕ್ಕಿತು, ಒಂದನ್ನು ಖರೀದಿಸಿದೆ ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹೋಮ್ಬರ್ಗ್ ಪ್ರತಿಕ್ರಿಯೆ ನೀಡಿ “ನಾನು ಆಟೋ ಓಡಿಸುವುದನ್ನು ತುಂಬಾ ಆನಂದಿಸುತ್ತೇನೆ. ನನಗೆ, ರಾಜತಾಂತ್ರಿಕತೆಯು ಜನರನ್ನು ಭೇಟಿಯಾಗುವುದು, ಪರಸ್ಪರ ತಿಳಿದುಕೊಳ್ಳುವುದು ಮತ್ತು
ಸಂಬಂಧಗಳನ್ನು ಬೆಳೆಸಲು ಅವಕಾಶವನ್ನು ಪಡೆಯುವುದಾಗಿದೆ ಎಂದು ಭಾವಿಸಿರುವೆ. ನಾನು ಪ್ರತಿದಿನ ಜನರನ್ನು ಭೇಟಿಯಾಗುತ್ತೇನೆ. ನನ್ನ ಕೆಲಸದ ಬಳಿಕ ಮಾರುಕಟ್ಟೆಗೆ ಆಟೋದಲ್ಲಿ ಹೋಗುತ್ತಿದ್ದೇನೆ. ನನ್ನ ಏರಿಯಾದ ವ್ಯಾಪಾರಸ್ಥರು ಗೊತ್ತು, ಅವರೆಲ್ಲರೂ ಆಟೋದೊಂದಿಗೆ ಮಾರುಕಟ್ಟೆಯಲ್ಲಿ ನನ್ನನ್ನು ನೋಡಲು ಉತ್ಸುಕರಾಗಿದ್ದಾರೆ” ಎಂದು ವಿವರಿಸಿದ್ದಾರೆ.