ಅಸ್ಸಾಂನ ಜನಪ್ರಿಯ ಸಾಂಸ್ಕೃತಿಕ ಹಬ್ಬವಾದ ಬಿಹು ಹಾಗೂ ಅಲ್ಲಿನ ಹೊಸ ವರ್ಷದ ಸಂಭ್ರಮಕ್ಕೆ ಈಶಾನ್ಯದ ರಾಜ್ಯ ಸಾಕ್ಷಿಯಾಗಿದೆ. ಮೂರು ಬಿಹುಗಳಲ್ಲಿ ಒಂದಾದ ರೊಂಗಾಲಿ ಬಿಹುವನ್ನು ಈ ಸಂದರ್ಭದಲ್ಲಿ ಅಸ್ಸಾಂ ಆಚರಿಸುತ್ತಿದೆ.
ಅಸ್ಸಾಮೀ ಪಂಚಾಂಗದ ಮೊದಲ ತಿಂಗಳಾದ ಬೊಹಾಗ್‌ನುದ್ದಕ್ಕೂ ಅಲ್ಲಿನ ಜನರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಉರುಕಾದ ದಿನದಂದು ಅಸ್ಸಾಮೀ ಜನರು ಎರಡು ವಿನೂತನ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಏಪ್ರಿಲ್ 13ರಂದು 11,304 ಬಿಹು ನೃತ್ಯಪಟುಗಳು (ಬಿಹುವೋಟಿ) ಹಾಗು ಡ್ರಮ್ಮರ್‌ಗಳು (ಧುಲಿಯಾ) ಗುವಾಹಾಟಿಯ ಸರೂಸಜಾಯ್ ಕ್ರೀಡಾಂಗಣದಲ್ಲಿ ಒಮ್ಮೆಲೇ ಬಿಹು ನೃತ್ಯ ಪ್ರದರ್ಶನ ಕೊಟ್ಟಿದ್ದಾರೆ.
ಈ ನೃತ್ಯದ ಸಂದರ್ಭದಲ್ಲಿ 2,548 ಸಾಂಪ್ರದಾಯಿಕ ವಾದಕರು ಡ್ರಮ್ ಬಡಿದಿದ್ದಾರೆ. ಈ ಮೂಲಕ ಒಂದೇ ದಿನದಂದು ಎರಡು ರೀತಿಯ ಗಿನ್ನೆಸ್ ದಾಖಲೆಗಳು ಬಿಹು ಸಂಭ್ರಮದ ವೇಳೆ ಸೃಷ್ಟಿಯಾಗಿವೆ.
ಈ ಮುನ್ನ 1,356 ವಾದಕರು ಗುವಾಹಾಟಿಯ ಸರೂಸಜಾಯ್ ಕ್ರೀಡಾಂಗಣದಲ್ಲಿ ಡೋಲು ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.