G – 7 ಶೃಂಗಸಭೆಗಾಗಿ ಜರ್ಮನಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಾಪಸ್ ಬರುವ ವೇಳೆ ಅಬುಧಾಬಿಗೆ ಅಲ್ಪಕಾಲದ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಯುಎಇ ಅಧ್ಯಕ್ಷ ಹಾಗೂ ಅಬುಧಾಬಿ ಆಡಳಿತಗಾರರಾದ ಶೇಕ್ ಮೊಹಮ್ಮದ್ ಬಿನ್ ಝಾಯಿದ್ ಅಲ್ ನಯ್ಹೆನ್ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶೇಕ್ ಮಹಮ್ಮದ್ ಅವರ ಜೊತೆಗೆ ರಾಜ ಕುಟುಂಬದ ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದು, ಇದೇ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕಳೆದ ತಿಂಗಳು ವಿಧಿವಶರಾದ ಶೇಕ್ ಖಲೀಫಾ ಬಿನ್ ಝಾಯಿದ್ ಅಲ್ ನಯ್ಹೆನ್ ಅವರಿಗೆ ಸಂತಾಪ ಸೂಚಿಸಿದ್ದಾರೆ. 2019ರ ಬಳಿಕ ಉಭಯ ದೇಶಗಳ ನೇತಾರರ ಮೊದಲ ಭೇಟಿ ಇದಾಗಿದೆ.
ತಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ನನ್ನ ಸಹೋದರ ಸಮಾನರಾದ ಶೇಕ್ ಮಹಮ್ಮದ್ ಬಿನ್ ಝಾಯಿದ್ ಅಲ್ ನಯ್ಹೆನ್ ಅವರ ನಡೆಯಿಂದ ನನ್ನ ಹೃದಯ ತುಂಬಿ ಬಂದಿದೆ. ನನ್ನ ಸ್ವಾಗತಕ್ಕಾಗಿ ಅಬುಧಾಬಿಯ ವಿಮಾನ ನಿಲ್ದಾಣಕ್ಕೆ ಬಂದ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.