ಮಂಗಳವಾರದಂದು ಪುಣೆಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವಿನ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 29 ರನ್ ಗಳ ಅಂತರದಿಂದ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ ನಷ್ಟಕ್ಕೆ 144 ರನ್ ಗಳನ್ನು ಕಲೆ ಹಾಕಿತು.
ನಂತರ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 115 ರನ್ನುಗಳನ್ನಷ್ಟೇ ಗಳಿಸಿ ಪರಾಭವಗೊಂಡಿತು. ಆರ್.ಸಿ.ಬಿ.ಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 9 ರನ್ ಗಳನ್ನು ಗಳಿಸಿದ್ದು, ಅವರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲೂ ಮುಂದುವರೆದಿದೆ. ಇದರ ಮಧ್ಯೆ ನಡೆದ ಘಟನೆಯೊಂದು ಈಗ ಎಲ್ಲರ ಗಮನ ಸೆಳೆದಿದ್ದು, ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು, ಈ ಸಂದರ್ಭದಲ್ಲಿ ಆರ್.ಸಿ.ಬಿ. ಯ ಹರ್ಷಲ್ ಪಟೇಲ್ ಹಾಗೂ ಆರ್.ಆರ್. ತಂಡದ ರಿಯಾನ್ ಪಟೇಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ಒಂದು ಹಂತದಲ್ಲಿ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಆಟಗಾರರೊಬ್ಬರು ಇಬ್ಬರನ್ನೂ ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಆದರೂ ಕೂಡಾ ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಂತೆ ಕಂಡ ಹರ್ಷಲ್ ಪಟೇಲ್ ಎರಡನೇ ಇನ್ನಿಂಗ್ಸ್ ಬಳಿಕ ತಮ್ಮ ತಂಡ ಪರಾಭವಗೊಂಡ ಬಳಿಕ ಪೆವಿಯಲಿನ್ ಗೆ ಎಲ್ಲರೂ ಮರಳುವ ವೇಳೆ ಸಂಪ್ರದಾಯದಂತೆ ಎದುರಾಳಿ ಆಟಗಾರರು ಕೈ ಕುಲಕಲು ಬಂದಾಗ ರಿಯಾನ್ ಪರಾಗ್ ಅವರು ಕೈ ಚಾಚಿದರೂ ನಿರ್ಲಕ್ಷ್ಯ ಮಾಡಿ ಮುಂದೆ ಹೋಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್ ವಿರುದ್ದ ಕ್ರೀಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.