ಅದಾನಿ ಸಮೂಹದ ಕುರಿತು ಅಮೆರಿಕ ಮೂಲದ ಹಿಂಡನ್ ಬರ್ಗ್ ಸಂಸ್ಥೆ ವರದಿ ಬಿಡುಗಡೆ ಮಾಡಿದ ಬಳಿಕ ಪ್ರತಿಪಕ್ಷ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ನೇಹಿತ ಗೌತಮ್ ಅದಾನಿ ರಕ್ಷಣೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ನರೇಂದ್ರ ದಾಮೋದರ ದಾಸ್ ಮೋದಿ ಎನ್ನುವುದರ ಬದಲಿಗೆ ಬೇಕೆಂದೇ ನರೇಂದ್ರ ಗೌತಮ್ ದಾಸ್ ಮೋದಿ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ನರೇಂದ್ರ ಮೋದಿ, ಗೌತಮ್ ಅದಾನಿ ರಕ್ಷಣೆಗೆ ನಿಂತಿದ್ದಾರೆ ಎಂಬುದನ್ನು ಹೇಳುವ ಸಲುವಾಗಿ ಮೋದಿ ಅವರ ತಂದೆ ಹೆಸರಿನ ಜಾಗದಲ್ಲಿ ಗೌತಮ್ ಅದಾನಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಇದು ಈಗ ಬಿಜೆಪಿ ಪಾಳೆಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಹಿರಿಯ ನಾಯಕ ಅಮಿತ್ ಮಾಳವೀಯಾ, ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕುಟುಂಬಸ್ಥರನ್ನು ಈ ಹಿಂದೆಯೂ ಗುರಿಯಾಗಿಸಿ ಮಾತನಾಡಿದ್ದು ಈಗಲೂ ಅದನ್ನು ಮುಂದುವರಿಸಿದ್ದಾರೆ. ಗಾಂಧಿ ಪರಿವಾರ ಇದಕ್ಕೆ ಪ್ರೋತ್ಸಾಹ ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಿಜೆಪಿ ನಾಯಕರಾದ ಪ್ರೀತಿ ಗಾಂಧಿ ಕೂಡ ಪವನ್ ಖೇರಾ ಅವರ ಹೇಳಿಕೆಗೆ ಕಿಡಿ ಕಾರಿದ್ದು, ತಮ್ಮ ಬಾಸ್ ಗಳನ್ನು ಮೆಚ್ಚಿಸಲು ಅಮಿತ್ ಖೇರಾ, ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಕುರಿತು ಅವಮಾನಕಾರಿಯಾಗಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಪವನ್ ಖೇರಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ ಮಧ್ಯೆ ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪವನ್ ಖೇರಾ, ನಾನು ಉದ್ದೇಶಪೂರ್ವಕವಾಗಿ ಆ ಮಾತುಗಳನ್ನು ಆಡಿಲ್ಲ. ಪತ್ರಿಕಾಗೋಷ್ಠಿ ಮಧ್ಯೆ ಆಕಸ್ಮಿಕವಾಗಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.