ಈಗಂತೂ ಪಾತ್ರೆ ತೊಳೆಯಲು ಹಲವು ಸೋಪು, ಲಿಕ್ವಿಡ್‌ಗಳು ದೊರೆಯುತ್ತವೆ. ಆದರೆ ಇಂಥ ರಾಸಾಯನಿಕ ವಸ್ತುಗಳಿಂದ ಪಾತ್ರೆ ತೊಳೆಯುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವರಿಗೆ ಸ್ಕಿನ್ ಅಲರ್ಜಿ ಉಂಟಾಗಬಹುದು.
ಅಂಥವರು ಅಡುಗೆ ಮನೆಯಲ್ಲಿ ದೊರೆಯುವ ಕೆಲ ನೈಸರ್ಗಿಕ ವಸ್ತುಗಳಿಂದ ಪಾತ್ರೆ ತೊಳೆಯಬಹುದು.
* ಅಂಟವಾಳ ಕಾಯಿಯನ್ನು ನೀರಲ್ಲಿ ಹಾಕಿದರೆ ಸೋಪಿನಂತೆ ನೊರೆ ಬರುತ್ತದೆ. ಇದರಿಂದ ಪಾತ್ರೆಯನ್ನು ತೊಳೆದರೆ ಪಾತ್ರೆಗಳು ಫಳ ಫಳ ಹೊಳೆಯುತ್ತದೆ. ಬೆಳ್ಳಿ ಸಾಮಾನುಗಳನ್ನು ತೊಳೆಯಲು ಸಹ ಈ ಕಾಯಿಯನ್ನು ಬಳಸಬಹುದು.
* ಹುಣಸೆ ಹಣ್ಣಿನಿಂದ ರಸ ತೆಗೆದ ನಂತರ ಹುಣಸೆ ಹಣ್ಣನ್ನು ಬಿಸಾಡಬೇಡಿ. ಅದರಿಂದ ಕೂಡ ಪಾತ್ರೆಗಳನ್ನು ತೊಳೆಯಬಹುದು. ಅದರಲ್ಲೂ ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳನ್ನು ತೊಳೆದರೆ ಪಾತ್ರೆಗಳು ಹೊಳೆಯುತ್ತವೆ.
* ನಿಂಬೆ ಹಣ್ಣಿನ ರಸವನ್ನು ಅಡುಗೆಗೆ ಬಳಸಿ ಸಿಪ್ಪೆಯನ್ನು ಎಸೆಯಬೇಡಿ. ಇದರಲ್ಲಿರುವ ಸಿಟ್ರಿಕ್ ಅಂಶ ಪಾತ್ರೆಗಳಲ್ಲಿರುವ ಕೀಟಾಣುಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಪಾತ್ರೆಗಳಲ್ಲಿ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ. ಹಾಗೆಯೇ ಸಿಟ್ರಿಕ್ ಅಂಶ ವಿರುವ ಕಿತ್ತಳೆ, ಮೋಸಂಬಿ, ಚಕ್ಕೋತಾ ಸಿಪ್ಪೆಗಳನ್ನು ಬಿಸಾಡದೆ ಪಾತ್ರೆ ತೊಳೆಯಲು ಬಳಸಬಹುದು.
* ಪಾತ್ರೆ ಉಜ್ಜಲು ಮೆಟಲ್ ಇನ್ನಿತರ ಆಧುನಿಕ ಪಾತ್ರೆ ತೊಳೆಯುವ ಸ್ಕ್ರಬ್‌ಗಳ ಬದಲಾಗಿ ತೆಂಗಿನ ನಾರನ್ನು ಉಪಯೋಗಿಸಬಹುದು. ಇದರಿಂದ ಪಾತ್ರೆಗಳು ಸ್ವಚ್ಛವಾಗುತ್ತದೆ ಹಾಗೂ ಸ್ಕ್ರಬ್ ಖರೀದಿಸುವ ಹಣವನ್ನು ಉಳಿಸಬಹುದು.