ಗುವಾಹಟಿ: ಅಸ್ಸಾಂನ ದಿಬ್ರುಗಢದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮತ್ತು ಆಕೆಯ ಬೆತ್ತಲೆ ಫೋಟೋ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಸೋಮವಾರ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸೋದರ ಸಂಬಂಧಿ ಮತ್ತು ಸ್ನೇಹಿತನೊಬ್ಬನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶನಿವಾರ ವಿದ್ಯಾರ್ಥಿನಿ ದೂರು ನೀಡಿದ್ದು, ಆರು ತಿಂಗಳ ಹಿಂದೆ ನಿದ್ರಾಜನಕ ಪಾನೀಯ ನೀಡಿದ ನಂತರ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ಬೆತ್ತಲೆ ಫೋಟೋ ಹೊರಬಂದ ಬಳಿಕ ಬ್ಲಾಕ್ ಮೇಲ್ ಮಾಡಲು ಯತ್ನಿಸಿದ ಇತರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಯಾರೋ ತಾನು ಮದುವೆಯಾಗುವ ಹುಡುಗನಿಗೆ ನಗ್ನ ಫೋಟೋ ಕಳುಹಿಸಿದಾಗ ಆಕೆಗೆ ಇದೆಲ್ಲ ವಿಚಾರ ಗೊತ್ತಾಗಿದೆ. ಬಳಿಕ ಯುವತಿ ದೂರು ನೀಡಿದ್ದಾಳೆ ಎಂದು ದಿಬ್ರುಗಢದ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾಂಕ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಬೊರ್ಬೊರುವಾ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಆರು ತಿಂಗಳ ಹಿಂದೆ ಯುವತಿ ದ್ವಿಚಕ್ರ ವಾಹನದಲ್ಲಿ ಪ್ರಮುಖ ಆರೋಪಿಯೊಂದಿಗೆ ಕಾಲೇಜಿಗೆ ಹೋಗುತ್ತಿದ್ದಾಗ. ವಾಹನ ಕೆಟ್ಟು ಹೋಗಿದ್ದು, ಮಾರ್ಗಮಧ್ಯದಲ್ಲಿ ಆತನ ಸಂಬಂಧಿಕರ ಕಾರ್ ನಲ್ಲಿ ಲಿಫ್ಟ್ ತೆಗೆದುಕೊಂಡಿದ್ದಾರೆ.
ಈ ವೇಳೆ ಆಕೆಗೆ ನಿದ್ರಾಜನಕ ಪಾನೀಯ ಕುಡಿದು ಪ್ರಜ್ಞೆತಪ್ಪಿದೆ. ಆಕೆಗೆ ಎಚ್ಚರವಾದ ಸಂದರ್ಭದಲ್ಲಿ ಆರೋಪಿಯ ಸಂಬಂಧಿಕರ ಮನೆಯಲ್ಲಿ ಇಬ್ಬರು ಯುವಕರ ಜೊತೆಗೆ ಆರೋಪಿ ಕೂಡ ಇದ್ದರು ಎಂದು ಯುವತಿ ತಿಳಿಸಿರುವುದಾಗಿ ಡಿಬ್ರುಗಢ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಚೆಟಿಯಾ ಹೇಳಿದ್ದಾರೆ.
ಪ್ರಜ್ಞಾಹೀನಳಾಗಿದ್ದರಿಂದ ಸಂತ್ರಸ್ತೆಗೆ ಅಂದು ನಡೆದ ಘಟನೆಯ ಯಾವುದೇ ಮಾಹಿತಿ ಇರಲಿಲ್ಲ. ಅತ್ಯಾಚಾರ ಎಸಗಿದ ಆರೋಪಿಗಳು ಆಕೆಯ ನಗ್ನ ಫೋಟೋ ತೆಗೆದಿದ್ದಾರೆ. ಇತ್ತೀಚೆಗೆ ಅವುಗಳನ್ನು ಪ್ರಸಾರ ಮಾಡಿದ್ದಾರೆ. ಇದಾದ ನಂತರ ಕೆಲವರು ಆಕೆಯನ್ನು ಬ್ಲಾಕ್ಮೇಲ್ ಮಾಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.