
ಮೊಹಮ್ಮದ್ ಸಿರಾಜ್ ಬಗ್ಗೆ ಹೇಳೋದೆ ಬೇಡ, ಕ್ರಿಕೆಟ್ ಪ್ರಿಯರಿಗೆ ಇವರ ಹೆಸರು ಚಿರಪರಿಚಿತ. ಆರ್ಸಿಬಿ ತಂಡದಿಂದ ಸಿಕ್ಕಾಪಟ್ಟೇ ಫೇಮಸ್ ಆಗಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಹೆಸರು ಮಾಡಿರುವ ಸಿರಾಜ್ ಜೀವನ ಕಥೆ ಗೊತ್ತೇ ಇದೆ.
ಬಡತನದಿಂದ ಜೀವನದಲ್ಲಿ ಒಳ್ಳೆ ಸ್ಥಾನ ತಲುಪಿರುವ ಸಿರಾಜ್ ತಂದೆ ಆಟೋ ಡ್ರೈವರ್ ಎಂಬುದು ಹೊಸ ವಿಷಯವೇನಲ್ಲ. ಆದ್ರೆ ನಮ್ಮೆಲ್ಲರಿಗೂ ಗೊತ್ತಿಲ್ಲದ ಮತ್ತೊಂದು ವಿಷಯವನ್ನ ಆರ್ಸಿಬಿ ಪಾಡ್ ಕಾಸ್ಟ್‌ನಲ್ಲಿ (Podcast) ಹಂಚಿಕೊಂಡಿರುವ ಸಿರಾಜ್, ತಮ್ಮ ವೃತ್ತಿ ಜೀವನದಲ್ಲಿ ತಾವು ಅನುಭವಿಸಿದ ಕಷ್ಟಗಳನ್ನು ಮೆಲುಕು ಹಾಕಿದ್ದಾರೆ.
ಹೌದು, 2019ರಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ 2.2 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಯಾವುದೇ ವಿಕೆಟ್ ಪಡೆಯದೇ 36 ರನ್ ನೀಡಿ ತೀರಾ ಕಳಪೆ ಪ್ರದರ್ಶನ ನೀಡಿದ್ದರು.
ಆ ಇಡೀ ಆವೃತ್ತಿಯಲ್ಲಿ ಟೂರ್ನಿಯುದ್ದಕ್ಕೂ ಸಿರಾಜ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಆ ಸಂದರ್ಭದಲ್ಲಿ ತಾನು ಎದುರಿಸಿದ ನಿಂದನೆ, ಅದನ್ನ ಮೀರಿ ಎಂಎಸ್ ಧೋನಿ ಹೇಳಿದ್ದ ಮಾತು ಯಾವ ರೀತಿ ಸಹಾಯ ಮಾಡಿತು ಎಂಬುದನ್ನು ಸಿರಾಜ್ ಬಿಚ್ಚಿಟ್ಟಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಆ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೆಟ್ಟ ರೀತಿಯ ಟೀಕೆಗಳು ಎದುರಾಗಿದ್ದವು ಎಂಬುದನ್ನು ಬಿಚ್ಚಿಟ್ಟಿದ್ದಾರೆ. 2019ರಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎರಡು ಬೀಮರ್‌ಗಳನ್ನು ಎಸೆದಾಗ ವ್ಯಾಪಕ ಟೀಕೆಗೆ ಗುರಿಯಾಗಿದ್ದೆ. ಆಗ ಜನ ನನಗೆ ಕ್ರಿಕೆಟ್ ಬಿಟ್ಟು, ತಂದೆ ಜೊತೆಗೆ ಆಟೊ ಓಡಿಸುವಂತೆ ಹೇಳಿದ್ದರು. ಎಲ್ಲೆಡೆಯಿಂದ ಟೀಕೆಗಳು ಬಂದಿದ್ದವು, ಎಂದು ಸಿರಾಜ್ ತಮ್ಮ ಐಪಿಎಲ್ ವೃತ್ತಿಬದುಕಿನ ಕರಾಳ ದಿನಗಳನ್ನು ಸ್ಮರಿಸಿದ್ದಾರೆ.
ಐಪಿಎಲ್ ತಂಡಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ, ನೀನು ಉತ್ತಮ ಪ್ರದರ್ಶನ ನೀಡಿದರೆ ಎಲ್ಲರೂ ಕೂಡ ನಿನಗೆ ಪ್ರಶಂಸೆಯ ಸುರಿಮಳೆ ಸುರಿಸುತ್ತಾರೆ, ಆದರೆ ಕಳಪೆ ಪ್ರದರ್ಶನ ನೀಡಿದರೆ ಅದೇ ಜನ ನಿನ್ನ ವಿರುದ್ಧ ಟೀಕಾಪ್ರಹಾರವನ್ನು ನಡೆಸುತ್ತಾರೆ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ನೀನು ಅವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು’ ಎಂದು ಸಿರಾಜ್ ಗೆ, ಎಂ.ಎಸ್. ಧೋನಿ ಸಲಹೆ ನೀಡಿದ್ದರಂತೆ. ಹೀಗೆ ಎಂ.ಎಸ್. ಧೋನಿ ಅವರ ಸಲಹೆಯಂತೆ ತಾನು ಆ ಟೀಕೆಗಳನ್ನೆಲ್ಲಾ ಬದಿಗೆ ಸರಿಸಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಆರ್‌ಸಿಬಿ ತಂಡದ ಪರ 2019ರಲ್ಲಿ ನೀಡಿದ ಪ್ರದರ್ಶನ ಅತ್ಯಂತ ಕೆಟ್ಟದಾಗಿತ್ತು. ಅದೇ ನನ್ನ ಐಪಿಎಲ್ ವೃತ್ತಿಬದುಕಿನ ಕೊನೇ ಅಂದುಕೊಂಡಿದ್ದೆ. ನಂತರ ನನ್ನೊಟ್ಟಿಗೆ ಇನ್ನು ವಯಸ್ಸಿನ ಬೆಂಬಲವಿದೆ ಎಂಬುದನ್ನು ಅರ್ಥಮಾಡಿಕೊಂಡೆ. ನನ್ನ ಸಾಮರ್ಥ್ಯದ ಮೇಲೆ ವಿಶ್ವಾಸವನ್ನಿಟ್ಟು ಆಡಿದೆ. ನನ್ನ ಮೇಲೆ ಭರವಸೆ ಇಟ್ಟ ತಂಡಕ್ಕೆ ಧನ್ಯವಾದಗಳು ಎಂದಿದ್ದಾರೆ ಸಿರಾಜ್.