ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲೊಂದು. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದ ದ್ರವಗಳ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಖನಿಜಗಳ ಶೇಖರಣೆ ಕಿಡ್ನಿಯಲ್ಲಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. ಇದನ್ನು ಕಿಡ್ನಿ ಸ್ಟೋನ್ ಎಂದು ಕರೆಯುತ್ತೇವೆ. ಈ ಕಲ್ಲುಗಳು ತೀವ್ರವಾದ ನೋವು, ಮೂತ್ರದಲ್ಲಿ ರಕ್ತ ಮತ್ತು ಸೋಂಕನ್ನು ಉಂಟುಮಾಡಬಹುದು.
ಮೂತ್ರಪಿಂಡದ ಕಲ್ಲುಗಳ ಬಗ್ಗೆ ಅನೇಕ ಅಸತ್ಯ ಸಂಗತಿಗಳಿವೆ. ಇದು ರೋಗಿಗಳಲ್ಲಿ ಗೊಂದಲ ಸೃಷ್ಟಿಸುವುದರ ಜೊತೆಗೆ ಪರಿಸ್ಥಿತಿಯನ್ನು ಇನ್ನಷ್ಟು ಅಪಾಯಕಾರಿಯಾಗಿಸುತ್ತದೆ.
ಕಿಡ್ನಿ ಕಲ್ಲುಗಳು ಪುರುಷರಲ್ಲಿ ಮಾತ್ರ ಕಂಡುಬರುತ್ತವೆ ಎಂಬ ಭಾವನೆ ಜನರಲ್ಲಿದೆ. ಆದರೆ ಇದು ಅಸತ್ಯ. ಕಿಡ್ನಿ ಕಲ್ಲುಗಳು ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಆದರೆ ಮಹಿಳೆಯರಲ್ಲೂ ಈ ಸಮಸ್ಯೆ ಬರಬಹುದು. ವಾಸ್ತವವಾಗಿ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಕಿಡ್ನಿ ಕಲ್ಲುಗಳ ಸಮಸ್ಯೆ ಹೆಚ್ಚಾಗಿದೆ.
ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಅಪ್ಪಟ ಸುಳ್ಳು. ಬಿಯರ್‌ನಲ್ಲಿರುವ ಆಲ್ಕೋಹಾಲ್ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಬಿಯರ್ ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸಬಹುದು. ಇದು ಕಲ್ಲಿನ ರಚನೆಗೆ ಕಾರಣವಾಗುತ್ತದೆ.
ಕಿಡ್ನಿ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ ಮಾತ್ರ ಪರಿಹಾರವೆಂಬ ಭಾವನೆ ಅನೇಕರಲ್ಲಿದೆ. ಹೆಚ್ಚಿನ ಪ್ರಕರಣಗಳಲ್ಲಿ ಮೂತ್ರಪಿಂಡದ ಕಲ್ಲುಗಳು ಚಿಕ್ಕದಾಗಿರುತ್ತವೆ, ಕೆಲವು ವಾರಗಳಲ್ಲಿ ನೈಸರ್ಗಿಕವಾಗಿ ದೇಹದಿಂದ ಹೊರಬರುತ್ತವೆ. ನೋವು ಕಡಿಮೆ ಮಾಡಲು ಮತ್ತು ಕಲ್ಲುಗಳು ಕರಗಲು ವೈದ್ಯರು ಔಷಧಿಗಳನ್ನು ನೀಡಬಹುದು. ದೊಡ್ಡದಾಗಿ ಅಥವಾ ಅಂಟಿಕೊಂಡಿರುವ ಕಲ್ಲುಗಳಿಗೆ ಮಾತ್ರ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.
ಕಿಡ್ನಿ ಸ್ಟೋನ್‌ಗೆ ಚಿಕಿತ್ಸೆಯೇ ಇಲ್ಲ ಎಂಬುದು ಕೂಡ ಅಸತ್ಯ. ಮೂತ್ರಪಿಂಡದ ಕಲ್ಲುಗಳು ಮತ್ತೆ ಮತ್ತೆ ಬರುವ ಸಾಧ್ಯತೆ ಇರುತ್ತದೆ. ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು. ಸಾಕಷ್ಟು ನೀರು ಕುಡಿಯುವುದು, ಕಡಿಮೆ ಉಪ್ಪು ಸೇವನೆ, ಕ್ಯಾಲ್ಸಿಯಂ ಮತ್ತು ಫೈಬರ್ ಭರಿತ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.