ಚೆನ್ನಾಗಿ ಹಸಿವಾಗುವುದು ಉತ್ತಮ ಆರೋಗ್ಯದ ಸಂಕೇತ. ಊಟ ಮಾಡಬೇಕೆಂಬ ಬಯಕೆಯೇ ಆಗದಿದ್ದರೆ, ಹಸಿವಾಗದಿದ್ದರೆ ಇದು ಆತಂಕದ ಸಂಗತಿ. ಚಟುವಟಿಕೆಯ ಮಟ್ಟಗಳಲ್ಲಿನ ಹೆಚ್ಚಳ ಅಥವಾ ಇಳಿಕೆ, ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳು ಅಥವಾ ಅನಾರೋಗ್ಯದಿಂದ ಹಸಿವಿನ ನಷ್ಟ ಉಂಟಾಗಬಹುದು.
ಯಾವುದೇ ರೋಮಾಂಚಕಾರಿ ಅಥವಾ ಪ್ರಮುಖ ಘಟನೆಗೂ ನಮಗೆ ಹಸಿವಾಗುವುದೇ ಇಲ್ಲ. ನಿದ್ರೆ ಕೂಡ ಹಾಳಾಗುತ್ತದೆ. ಇದು ತಾತ್ಕಾಲಿಕ. ಪ್ರಮುಖ ಘಟನೆಯ ನಂತರ ಹಸಿವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ಯಾವುದೇ ಕಾರಣವಿಲ್ಲದೆ ದೀರ್ಘಕಾಲದವರೆಗೆ ಹಸಿವನ್ನು ಕಳೆದುಕೊಂಡಿದ್ದರೆ ಈ ಬಗ್ಗೆ ಕಾಳಜಿ ವಹಿಸಬೇಕು. ಇದು ದೀರ್ಘಕಾಲದವರೆಗೆ ಮುಂದುವರಿದರೆ ಅದರ ಕಾರಣವನ್ನು ತಿಳಿದುಕೊಳ್ಳಬೇಖು. ಕೆಲವು ಬಗೆಯ ಅಸ್ವಸ್ಥತೆಗಳು, ಮಾನಸಿಕ ಆರೋಗ್ಯ ಸಮಸ್ಯೆ, ಥೈರಾಯ್ಡ್ ಸಮಸ್ಯೆ ಅಥವಾ ಕ್ಯಾನ್ಸರ್ ಕೂಡ ಹಸಿವಿನ ನಷ್ಟಕ್ಕೆ ಕಾರಣವಾಗಬಹುದು. ಆಹಾರದಲ್ಲಿ ನಿರಂತರವಾದ ಆಸಕ್ತಿಯ ಕೊರತೆಯು ಗಂಭೀರವಾದ ಆರೋಗ್ಯ ಪರಿಸ್ಥಿತಿಗಳ ಸಂಭವನೀಯ ಸೂಚಕವಾಗಿರಬಹುದು ಎನ್ನುತ್ತಾರೆ ತಜ್ಞರು.
ಥೈರಾಯ್ಡ್ – ಥೈರಾಯ್ಡ್ ಗ್ರಂಥಿಯು ದೇಹದ ಅನೇಕ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಇದು ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಹಸಿವಿನ ನಷ್ಟ, ತೂಕ ಹೆಚ್ಚಾಗುವುದು, ಆಯಾಸ ಮತ್ತು ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.
ಕ್ಯಾನ್ಸರ್ – ಕ್ಯಾನ್ಸರ್ ಒಂದು ಗಂಭೀರ ಕಾಯಿಲೆ. ದೇಹದ ಯಾವುದೇ ಭಾಗದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ಸಂಭವಿಸುತ್ತದೆ. ಶ್ವಾಸಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳು ಬಂದರೆ ಹಸಿವು ಕಡಿಮೆಯಾಗಬಹುದು.
ಅಸ್ವಸ್ಥತೆ – ಅನೋರೆಕ್ಸಿಯಾ ನರ್ವೋಸಾ ಮತ್ತು ಬುಲಿಮಿಯಾ ನರ್ವೋಸಾದಂತಹ ಆಹಾರದ ಅಸ್ವಸ್ಥತೆಗಳು ಹಸಿವಿನ ನಷ್ಟವನ್ನು ಉಂಟುಮಾಡಬಹುದು. ಈ ಅಸ್ವಸ್ಥತೆಗಳಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಆಹಾರವನ್ನು ಸರಿಯಾಗಿ ತಿನ್ನುವುದಿಲ್ಲ.
ಮಾನಸಿಕ ಆರೋಗ್ಯ ಸಮಸ್ಯೆ – ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಹಸಿವಿನ ನಷ್ಟಕ್ಕೆ ಕಾರಣವಾಗಬಹುದು. ಈ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಹೆಚ್ಚಾಗಿ ತಿನ್ನಲು ಆಸಕ್ತಿ ವಹಿಸುವುದಿಲ್ಲ.
ಜೀರ್ಣಾಂಗವ್ಯೂಹದ ತೊಂದರೆ – ಜೀರ್ಣಾಂಗವ್ಯೂಹದ ಸಮಸ್ಯೆಗಳಿಂದ ಹಸಿವಿನ ಹಠಾತ್ ನಷ್ಟವು ಉಂಟಾಗಬಹುದು. ಉರಿಯೂತದ ಕರುಳಿನ ಕಾಯಿಲೆ (IBD), ಜಠರದುರಿತ ಮತ್ತು ಜಠರ ಹುಣ್ಣುಗಳು ಹಸಿವಿನ ಮೇಲೆ ಪರಿಣಾಮ ಬೀರುತ್ತವೆ.