ಪುರುಷ ಮತ್ತು ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೆರಿಗೆ ಮುನ್ನ ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರ-1994 (ದುರ್ಬಳಕೆ ಮತ್ತು ತಡೆ) ಕಾಯಿದೆಯನ್ನು 1 ನೇ ಜನವರಿ 1996 ರಿಂದ ಜಾರಿಗೆ ಬಂದಿರುತ್ತದೆ.
ಈ ಕಾಯಿದೆಯ ಪ್ರಕಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವು ಆಗಿರುತ್ತದೆ. ಈ ಕಾಯಿದೆಯ ಅನ್ವಯ ಭ್ರೂಣಲಿಂಗ ಪತ್ತೆ, ಭ್ರೂಣಲಿಂಗ ಆಯ್ಕೆಗೆ ಸಂಬಂಧಿಸಿದಂತೆ, ಯಾವುದೇ ರೀತಿಯ ಜಾಹೀರಾತುಗಳನ್ನು ಈ ಕಾಯಿದೆಯಲ್ಲಿ ನಿಷೇಧಿಸಿದೆ. ಇದನ್ನು ಉಲ್ಲಂಘಿಸಿದಲ್ಲಿ 3 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ ರೂ.10 ಸಾವಿರ ವರೆಗೆ ದಂಡ ವಿಧಿಸಲಾಗುತ್ತದೆ.
ನೋಂದಾಯಿತ ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಅವರಿಗೆ ಮೊದಲಿನ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲುಶಿಕ್ಷೆ ಜೊತೆಗೆ ರೂ.10 ಸಾವಿರಗಳವರೆಗೆ ದಂಡ ವಿಧಿಸಲಾಗುವುದು. ಇದೇ ಅಪರಾಧ ಮತ್ತೊಮ್ಮೆ ಮಾಡಿದಲ್ಲಿ 5 ವರ್ಷಗಳವರೆಗೆ ಜೈಲುಶಿಕ್ಷೆ ಜೊತೆಗೆ ರೂ.50 ಸಾವಿರಗಳವರೆಗೆ ದಂಡ ವಿಧಿಸಲಾಗುವುದು.
ನ್ಯಾಯಾಲಯದಲ್ಲಿ ಅಪರಾಧ ನಿರ್ಣಯವಾಗುವವರೆಗೂ ಅವರ ನೋಂದಣಿಯನ್ನು ತಡೆ ಹಿಡಿಯಲಾಗುತ್ತದೆ. ಅಪರಾಧ ದೃಢಪಟ್ಟರೆ ಪ್ರಥಮ ಅಪರಾಧವಾದಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ, ಅವರ ಹೆಸರನ್ನು 5 ವರ್ಷಗಳವರೆಗೆ ತೆಗೆದುಹಾಕಲಾಗುತ್ತದೆ. ನಂತರ ಅಪರಾಧಕ್ಕೆ ಶಾಶ್ವತವಾಗಿ ವೈದ್ಯಕೀಯ ಮಂಡಳಿಯಿಂದ ಅವರ ಹೆಸರನ್ನು ತೆಗೆಯಲಾಗುತ್ತದೆ. ಮಹಿಳೆ, ಆಕೆಯ ಪತಿ ಹಾಗೂ ಅವರ ಸಂಬಂಧಿಕರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದಲ್ಲಿ ಅಂತಹವರು ಕೂಡ ಈ ಕಾಯಿದೆಯ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ.
ಮೊದಲ ಅಪರಾಧಕ್ಕೆ 3 ವರ್ಷಗಳವರೆಗೂ ಜೈಲು ಶಿಕ್ಷೆ ಜೊತೆಗೆ ರೂ.50 ಸಾವಿರಗಳವರೆಗೂ ದಂಡ ವಿಧಿಸಲಾಗುವುದು. ನಂತರದ ಅಪರಾಧಕ್ಕೆ 5 ವರ್ಷಗಳವರೆಗೂ ಜೈಲು ಶಿಕ್ಷೆ ಜೊತೆಗೆ ರೂ.1 ಲಕ್ಷಗಳವರೆಗೂ ದಂಡ ವಿಧಿಸಲಾಗುವುದು. ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ ಚಿಕಿತ್ಸಾಲಯಗಳು, ಜೆನೆಟಿಕ್ ಕ್ಲಿನಿಕ್‍ಗಳು ಹಾಗೂ ಜೆನೆಟಿಕ್ ಪ್ರಯೋಗಾಲಯಗಳು ಸಂಬಂಧಪಟ್ಟ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದಲ್ಲಿ ಅವರ ಮೇಲೂ ಕ್ರಮ ಜರುಗಿಸಲಾಗುತ್ತದೆ.
ಸಾರ್ವಜನಿಕರು, ಎಲ್ಲಿಯಾದರೂ ಭ್ರೂಣಹತ್ಯೆ ಅಪರಾಧಗಳು ನಡೆಯುತ್ತಿರುವ ಬಗ್ಗೆ ಸಂದೇಹಗಳು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲ್ಲಿಗೆ ಮಾಹಿತಿಯನ್ನು ನೀಡಿ ಸಹಕರಿಸಲು ಈ ಮೂಲಕ ಕೋರಿದೆ. ಮಾಹಿತಿ ನೀಡಿದವರ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು 9449843058, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು-9449843397, ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳು 9449843203, “ಗಂಡು ಮತ್ತು ಹೆಣ್ಣು ನಾಣ್ಯದ 2 ಮುಖಗಳು. ಇದನ್ನರಿತು ಎಲ್ಲರೂ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.