ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣವೆಸಗುತ್ತಿದ್ದು ಇದು ಜಗತ್ತಿನ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಕೆಲವು ದೇಶಗಳಲ್ಲಿ ರಷ್ಯಾದ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಇನ್ನು ರಷ್ಯಾದಲ್ಲಿ ಆರ್ಥಿಕತೆ ಮತ್ತು ನಿರ್ಬಂಧಗಳ ಮೇಲಿನ ಕಳವಳದ ನಂತರ, ಸ್ಥಳೀಯರು ಭಾರಿ ಪ್ರಮಾಣದಲ್ಲಿ ಖರೀದಿಸಲು ಅಂಗಡಿಗಳಿಗೆ ಧಾವಿಸುತ್ತಿದ್ದಾರೆ.
ಮೆಕ್‌ಡೊನಾಲ್ಡ್ಸ್, ಎಕ್ಸಾನ್-ಮೊಬಿಲ್, ಜನರಲ್ ಎಲೆಕ್ಟ್ರಿಕ್ ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ ವಿವಿಧ ಕಂಪನಿಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ. ಮೆಕ್‌ಡೊನಾಲ್ಡ್ಸ್ ಈ ವಾರದ ಆರಂಭದಲ್ಲಿ ತನ್ನ ಎಲ್ಲಾ 850 ರೆಸ್ಟೋರೆಂಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಮತ್ತು ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅಂದಹಾಗೆ, ಫಾಸ್ಟ್ ಫುಡ್ ದೈತ್ಯ ರಷ್ಯಾದಲ್ಲಿ 62,000 ಕಾರ್ಮಿಕರಿಗೆ ವೇತನವನ್ನು ಪಾವತಿಸುವುದಾಗಿ ಹೇಳಿದೆ.
ಉಕ್ರೇನ್‌ಗೆ ರಷ್ಯಾದ ಆಕ್ರಮಣದ ಬಗ್ಗೆ ಅಂತರರಾಷ್ಟ್ರೀಯ ಆಕ್ರೋಶದ ನಡುವೆ ಕಂಪನಿಯು ರಷ್ಯಾದ ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿರಲಿಲ್ಲ. ಇದರಿಂದ ಭಾರಿ ಟೀಕೆಗಳನ್ನು ಎದುರಿಸಿದ ನಂತರ ಮೆಕ್‌ಡೊನಾಲ್ಡ್ಸ್ ಈ ನಿರ್ಧಾರ ತೆಗೆದುಕೊಂಡಿದೆ. ಈ ವಿಷಯ ತಿಳಿದ ಕೂಡಲೇ ಜನರು ಮೆಕ್‌ಡೊನಾಲ್ಡ್ಸ್ ಗೆ ಸಾಗರೋಪಾದಿಯಲ್ಲಿ ಹರಿದುಬಂದಿದ್ದಾರೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ 12 ಸೆಕೆಂಡುಗಳ ವಿಡಿಯೋದಲ್ಲಿ, ಕಾರುಗಳ ಬೃಹತ್ ಸರತಿ ಮಾಸ್ಕೋದ ರೆಸ್ಟೋರೆಂಟ್ ಕಡೆಗೆ ನಿಲ್ಲಿಸಿರುವುದನ್ನು ಕಾಣಬಹುದು. ಕಣ್ಣಿಗೆ ಕಾಣುವಷ್ಟು ದೂರದವರೆಗೆ ಕಾರುಗಳು ಸಾಲಾಗಿ ನಿಂತಿವೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.