ಕೀವ್: ಉಕ್ರೇನ್ ನಲ್ಲಿ ನಿರಂತರ 8ನೇ ದಿನವೂ ಯುದ್ಧ ಮುಂದುವರೆಸಿರುವ ರಷ್ಯಾ, ಉಕ್ರೇನ್ ಪ್ರಮುಖ ನಗರಗಳನ್ನು ಹಂತ ಹಂತವಾಗಿ ವಶಕ್ಕೆ ಪಡೆಯುತ್ತಿದ್ದು, ಉಕ್ರೇನ್ ಸುತ್ತ ತನ್ನ ಸೇನಾ ಕೋಟೆಯನ್ನು ನಿರ್ಮಿಸುತ್ತಿದೆ. ಉಕ್ರೇನ್ ನ ಪ್ರಮುಖ ಬಂದರುಗಳು, ಸೇನಾ ನೆಲೆಗಳನ್ನು ಧ್ವಂಸಗೊಳಿಸಿರುವ ರಷ್ಯಾ ತೈಲ ಘಟಕಗಳನ್ನು ನಾಶಪಡಿಸುತ್ತಿದೆ.
ಈಗಾಗಲೇ ಉಕ್ರೇನ್ ನ ದಕ್ಷಿಣ ಭಾಗದಲ್ಲಿರುವ ಮೆರಿಯಪೋಲ್, ಖೆರ್ಸಾನ್ ಪ್ರದೇಶವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದಿರುವ ರಷ್ಯಾ ಸೇನೆ, ವಿದ್ಯುತ್, ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದೆ. ಮೆರಿಯಪೋಲ್ ಹೊರ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡಿದೆ. ಇನ್ನು ರಾಜಧಾನಿ ಕೀವ್ ಹಾಗೂ ಖಾರ್ಕೀವ್ ನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೆ ಉಕ್ರೇನ್ ಸೇನೆ ಭಾರಿ ಪ್ರತಿರೋಧ ಒಡ್ದಿದೆ.
ಮತ್ತೊಂದೆಡೆ ಉಕ್ರೇನ್ ನ ಪ್ರಮುಖ ತೈಲ ಘಟಕ ಚೆರ್ನಿಹಿವ್ ಘಟಕದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇಡೀ ತೈಲ ಘಟಕ ಹೊತ್ತಿ ಉರಿದಿದೆ. ಮತ್ತೊಂದೆಡೆ ಡ್ನಿಪ್ರೊ ನಗರ, ಬೆರ್ಡಿಯಾನಸ್ಕ್ ನಗರಗಳತ್ತ ರಷ್ಯಾ ಯುದ್ಧ ನೌಕೆಗಳು ಸಾಗಿದ್ದು, ಎರಡೂ ಪ್ರದೇಶಗಳ ಸುತ್ತ ಸೈನಿಕರು ಸುತ್ತುವರೆದಿದ್ದಾರೆ.