ನವದೆಹಲಿ: ಉಕ್ರೇನ್ ಹಾಗೂ ರಷ್ಯಾ ನಡುವಿನ ಭೀಕರ ಯುದ್ಧದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ಉಭಯ ದೇಶಗಳ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದು, ಉಕ್ರೇನ್-ರಷ್ಯಾ ಯುದ್ಧ ಅಂತ್ಯವಾಗಲಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಬೆಳಿಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಜತೆ ಚರ್ಚೆ ನಡೆಸಿದ್ದ ಪ್ರಧಾನಿ ಮೋದಿ, ಉಕ್ರೇನ್ ಪರಿಸ್ಥಿತಿ, ಭಾರತೀಯರ ಸುರಕ್ಷಿತ ಸ್ಥಳಾಂತರ ವಿಚಾರವಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ, ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆಸಿದ್ದಾರೆ.
ದೂರವಾಣಿ ಕರೆ ಮಾಡಿ ಮಾತನಾಡಿರುವ ಪ್ರಧಾನಿ ಮೋದಿ, ಪುಟಿನ್ ಜತೆ ಸುಮಾರು 50 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಉಕ್ರೇನ್-ರಷ್ಯಾ ನಡುವೆ ಮಾತುಕತೆ ಕುರಿತು ಪುಟಿನ್ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಅಧ್ಯಕ್ಷರ ಜತೆ ನೇರವಾಗಿ ಮಾತನಾಡುವಂತೆ ಪ್ರಧಾನಿ ಮೋದಿಯವರಿಗೆ ಪುಟಿನ್ ಒತ್ತಾಯಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ, ಉಕ್ರೇನ್ ನಲ್ಲಿ ಜನರ ಸ್ಥಳಾಂತರಕ್ಕಾಗಿ ಮಾನವೀಯ ಕಾರಿಡಾರ್ ನಿರ್ಮಿಸಿದ್ದಕ್ಕೆ, ಕದನ ವಿರಾಮ ಘೋಷಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧದ ಬಳಿಕ ಉಭಯ ದೇಶಗಳ ನಡುವಿನ ಎರಡು ಸುತ್ತಿನ ಮಾತುಕತೆ ವಿಫಲಗೊಂಡಿತ್ತು. ಇಂದು ಮೂರನೇ ಸುತ್ತಿನ ಶಾಂತಿ ಮಾತುಕತೆ ನಡೆಯಲಿದ್ದು, ಈ ಬೆಳವಣಿಗಳ ನಡುವೆಯೇ ಪ್ರಧಾನಿ ಮೋದಿ ಉಕ್ರೇನ್ ಹಾಗೂ ರಷ್ಯಾ ಎರಡೂ ದೇಶಗಳ ಅಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ್ದು, ಯುದ್ಧ ಶಾಂತವಾಗಲಿದೆಯೇ ಎಂಬ ಆಶಾಭಾವವನ್ನು ಮೂಡಿಸಿದೆ.