ಕೀವ್: ಉಕ್ರೇನ್ ಮೇಲೆ ಯುದ್ಧ ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ, ರಾಜಧಾನಿ ಕೀವ್, ಖಾರ್ಕಿವ್, ಸುಮಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಷ್ಯಾ ಸೇನೆ ಬೀಡುಬಿಟ್ಟಿದ್ದು, ಮನಬಂದಂತೆ ಗುಂಡಿನ ದಾಳಿ, ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ.
ಕೀವ್ ನಗರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರಷ್ಯಾ ನಡೆಸುತ್ತಿರುವ ಯತ್ನಕ್ಕೆ ಉಕ್ರೇನ್ ಸೇನೆ ಪ್ರಬಲ ಪ್ರತಿರೋಧವೊಡ್ಡಿದ್ದು, ರಷ್ಯಾದ ಯುದ್ಧ ಟ್ಯಾಂಕರ್ ಗಳನ್ನು ಧ್ವಂಸಗೊಳಿಸಿದೆ. ಆದಾಗ್ಯೂ ರಷ್ಯಾ ಮಿಲಿಟರಿ ಪಡೆಗಳು ತಮ್ಮ ಅಟ್ಟಹಾಸ ಮುಂದುವರೆಸಿದ್ದು, ಕೀವ್ ಮಧ್ಯ ಭಾಗದಲ್ಲಿ ಎರಡು ಕಡೆಗಳಲ್ಲಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಕೀವ್ ನಗರದಾದ್ಯಂತ ರಷ್ಯನ್ ಸೇನೆ ವೇಷ ಬದಲಿಸಿಕೊಂಡು ತಿರುಗಾಡುತ್ತಿದ್ದು, ಜನರು ಕ್ಷಣ ಕ್ಷಣಕ್ಕೂ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.
BIG BREAKING: ರಷ್ಯಾ-ಉಕ್ರೇನ್ ವಾರ್ ನಿಲ್ಲಿಸಲು ಮೊದಲ ಮಹತ್ವದ ಹೆಜ್ಜೆ: ಮಾತುಕತೆಗೆ ಬಂದ ರಷ್ಯಾ ನಿಯೋಗ
ಕೀವ್ ನಗರದ ಇಂಧನ ಪೂರೈಕೆ ಘಟಕದ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ರಷ್ಯಾ ಇದೀಗ ತಾಂತ್ರಿಕ ಶಾಲೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿ ಕಟ್ಟಡವನ್ನು ಸಂಪೂರ್ಣ ನಾಮಾವಶೇಷಗೊಳಿಸಿದೆ. ಮತ್ತೊಂದೆಡೆ ಕೀವ್ ನಲ್ಲಿ ವಾಯು ದಾಳಿ ಅಲರ್ಟ್ ಘೋಷಿಸಿರುವ ಉಕ್ರೇನ್ ಸೇನೆ, ಕಠಿಣ ಕರ್ಫೂ ಜಾರಿಗೊಳಿಸಲಾಗಿದೆ ಮನೆಯಿಂದ ಯಾರೂ ಹೊರಬರದಂತೆ ಸೂಚಿಸಿದೆ.
ಉಕ್ರೇನ್ ನ ದಕ್ಷಿಣ ಹಾಗೂ ಆಗ್ನೇಯ ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ ಎಂದು ವರದಿ ತಿಳಿಸಿದೆ. ಉಕ್ರೇನ್ ನ ಸುಮಿ ನಗರವನ್ನು ತನ್ನ ತೆಕ್ಕೆಗೆ ಪಡೆದಿರುವ ರಷ್ಯಾ ಸೇನೆ ಖಾರ್ಕಿವ್ ನಗರಕ್ಕೂ ಲಗ್ಗೆ ಇಟ್ಟಿದ್ದು, ಕಟ್ಟಡಗಳಿಗೆ ಬೆಂಕಿಯಿಟ್ಟಿದೆ. ಬೆಂಕಿ ಜ್ವಾಲೆಗೆ ವ್ಯಕ್ತಿಯೋರ್ವ ಸಜೀವ ದಹನಗೊಂಡಿದ್ದಾರೆ. ಖಾರ್ಕಿವ್ ನಗದರಲ್ಲಿ ಹಲವೆಡೆ ಬಾಂಬ್ ಸ್ಫೋಟ ನಡೆಸಲಾಗುತ್ತಿದ್ದು, ಕಟ್ಟಡಗಳ ಮೇಲೆ ಶೆಲ್ ದಾಳಿ ನಡೆಯುತ್ತಿದೆ. ಇಲ್ಲಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಗವರ್ನರ್ ಹೇಳಿಕೆ ನೀಡಿದ್ದಾರೆ.
ರಷ್ಯಾ ದಾಳಿಗೆ ಕಂಗೆಟ್ಟಿರುವ ಲಕ್ಷಾಂತರ ಉಕ್ರೇನ್ ಜನತೆ ತಮ್ಮ ಕುಟುಂಬ ಸಮೇತ ದೇಶ ತೊರೆಯುತ್ತಿದ್ದು, ವಿಮಾನ ಸಂಚಾರ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ರೈಲ್ವೆ ನಿಲ್ದಾಣಗಳಲ್ಲಿ ನೂಕು ನುಗ್ಗಲುವುಂಟಾಗಿದೆ.