ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು, ರಷ್ಯಾ ಸೇನೆ ಅಟ್ಟಹಾಸಕ್ಕೆ ಜೀವ ಕಳೆದುಕೊಂಡ ಅಮಾಯಕ ನಾಗರಿಕರಿಗೆ ಲೆಕ್ಕವಿಲ್ಲ. ಇತ್ತೀಚೆಗೆ ಉಕ್ರೇನ್ ನಲ್ಲಿ ತಿಂಡಿ ತರಲು ಮಾರ್ಕೆಟ್ ಗೆ ಹೋಗಿದ್ದ ಭಾರತೀಯ ವೈದ್ಯ ವಿದ್ಯಾರ್ಥಿ ರಷ್ಯಾ ದಾಳಿಗೆ ಬಲಿಯಾದ ಘಟನೆ ಬೆನ್ನಲ್ಲೇ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.
ವೈದ್ಯೆಯೊಬ್ಬರು ತನ್ನ ಅಮ್ಮನಿಗಾಗಿ ಔಷಧಿ ತರಲೆಂದು ಹೋಗುತ್ತಿದ್ದಾಗ ರಷ್ಯಾ ಸೇನೆಯ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ. 31 ವರ್ಷದ ವಲೇರಿಯಾ ಮೆಕ್ಸೆಟ್ಸ್ಕಾ ಎಂಬ ಯುವತಿ ಅಮ್ಮನಿಗಾಗಿ ಮೆಡಿಸಿನ್ ತರಲೆಂದು ತೆರಳಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಲೇರಿಯಾ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ವರ್ಷಗಳಿಂದ ಖಾಯಂ ಆಗಿ ಔಷಧಿ ತೆಗೆದುಕೊಳ್ಳುವ ಅಗತ್ಯವಿತ್ತು. ಆದರೆ ಔಷಧ ಖಾಲಿಯಾಗಿತ್ತು. ಉಕ್ರೇನ್ ನ ಹಲವು ಭಾಗಗಳಲ್ಲಿ ಔಷಧಿಗಾಗಿ ಹುಡುಕಾಡಿದ್ದರು. ಆದರೆ ಯುದ್ಧದಿಂದಾಗಿ ಎಲ್ಲಿಯೂ ಔಷಧಿ ಸಿಕ್ಕಿರಲಿಲ್ಲ. ಅನಿವಾರ್ಯವಾಗಿ ತಾಯಿಯನ್ನು ವಾಹನದಲ್ಲಿ ಕರೆದುಕೊಂಡು ಉಕ್ರೇನ್ ನ ಪಶ್ಚಿಮ ಗಡಿ ಭಾಗಕ್ಕೆ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ರಷ್ಯಾ ಸೇನೆ ಗುಂಡಿನ ದಾಳಿ ನಡೆಸಿದೆ.
ವಾಹನದಲ್ಲಿದ್ದ ವಲೇರಿಯಾ ಹಾಗೂ ಆಕೆಯ ತಾಯಿ ಮತ್ತು ವಾಹನ ಚಾಲಕ ಸೇರಿ ಮೂವರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.