ಸ್ಪೇನ್: ಒಂದು ಸೈಟ್ನ ಬೆಲೆಯೇ ಕೋಟಿ ಕೋಟಿ ರೂಪಾಯಿಗೆ ಬೆಲೆ ಬಾಳುವ ಈ ದಿನದಲ್ಲಿ ಎರಡು ಕೋಟಿ ರೂಪಾಯಿಗೆ ಒಂದು ಇಡೀ ಗ್ರಾಮವೇ ನಿಮ್ಮ ಕೈಗೆ ಸಿಗುತ್ತದೆ ಎಂದರೆ ನಂಬುವಿರಾ? ನಂಬಲೇಬೇಕು.
ಸ್ಪೇನ್ ದೇಶದ ಒಂದು ಹಳ್ಳಿ ಮಾರಾಟಕ್ಕಿದೆ. ಪೋರ್ಚುಗಲ್ ಗಡಿಭಾಗದ ಜಮೋರಾ ಪ್ರಾಂತ್ಯ ಸಾಲ್ಟೋ ಡೀ ಕ್ಯಾಸ್ಟ್ರೋ ಎಂಬ ಗ್ರಾಮವಿದು. ಇದರ ಮಾರಾಟದ ಬೆಲೆ 2.27 ಲಕ್ಷ ಯೂರೋ. ಅಂದರೆ ಸುಮಾರು 2.17 ಕೋಟಿ ರೂಪಾಯಿ. ವಿಶ್ವದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾದ ಮ್ಯಾಡ್ರಿಡ್‌ನಿಂದ ಕೇವಲ 3 ಗಂಟೆ ಡ್ರೈವ್ ದೂರದಲ್ಲಿದೆ ಈ ಊರು. ಇಲ್ಲಿ 44 ಮನೆಗಳು, ಹೋಟೆಲ್, ಚರ್ಚ್, ಶಾಲೆ ಇದೆ. ಸ್ವಿಮಿಂಗ್ ಪೂಲ್ ಕೂಡ ಇದೆ. ಸಿವಿಲ್ ಗಾರ್ಡ್‌ಗಳಿಗೆಂದು ನಿರ್ಮಿಸಲಾಗಿರುವ ಕಟ್ಟಡ ಸಮುಚ್ಚಯವೂ ಇಲ್ಲಿದೆ.
ಕಳೆದ 30 ವರ್ಷಗಳಿಂದ ಈ ಹಳ್ಳಿಯಲ್ಲಿ ಜನರೇ ಇಲ್ಲ. ಇದಕ್ಕೆ ಕಾರಣ, ಐವತ್ತರ ದಶಕದಲ್ಲಿ ಸ್ಯಾಲ್ಟೋ ಡೀ ಕ್ಯಾಸ್ಟ್ರೋ ಸಮೀಪವೇ ಜಲಾಶಯವೊಂದನ್ನು ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನಾ ಕಂಪೆನಿ ತನ್ನ ಉದ್ಯೋಗಿಗಳ ವಸತಿ ಮತ್ತಿತರ ವ್ಯವಸ್ಥೆ ಮಾಡಿತ್ತು. ಜಲಾಶಯ ನಿರ್ಮಾಣವಾದ ಬಳಿಕ ಉದ್ಯೋಗಿಗಳೆಲ್ಲರೂ 1980ರಲ್ಲಿ ಊರನ್ನು ತ್ಯಜಿಸಿ ಹೋಗಿದ್ದರಿಂದ ಊರಿಗೆ ಊರೇ ಖಾಲಿಯಾಗಿದೆ.
2000ರ ವರ್ಷದಲ್ಲಿ ಒಬ್ಬ ವ್ಯಕ್ತಿ ಈ ಇಡೀ ಊರನ್ನು ಖರೀದಿಸಿದ್ದ. ಪ್ರವಾಸೀ ಸ್ಥಳವಾಗಿ ಇದನ್ನು ರೂಪಿಸಬೇಕೆನ್ನುವುದು ಆತನ ಕನಸಾಗಿತ್ತು. ಆದರೆ ಯೂರೋಪ್‌ನಲ್ಲಿ ಬಿಕ್ಕಟ್ಟು ಶುರುವಾಗಿ ಇದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಹಳ್ಳಿಯನ್ನು ಮತ್ತೆ ಕಾರ್ಯಸ್ಥಿತಿಗೆ ತರಲು ಮತ್ತು ಲಾಭಕ್ಕೆ ಬರಲು 2 ಮಿಲಿಯನ್ ಯೂರೋ ಹಣ ಸಾಕಾಗಬಹುದು ಎನ್ನುವ ಕಾರಣಕ್ಕೆ ಅದನ್ನು ಮಾರಾಟ ಮಾಡಲು ಮುಂದಾಗಿದ್ದಾನೆ.