ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನಿಸ್ ನಲ್ಲಿ ಭಾವಿನಬೆನ್ ಪಟೇಲ್ ಅವರು ಬೆಳ್ಳಿ ಪದಕ ಗೆಲ್ಲುವ ಮುಖಾಂತರ ಭಾರತದ ಅತ್ಯಂತ ಯಶಸ್ವಿ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಸುಮಾರು ಎರಡು ದಶಕಗಳ ಹಿಂದೆ ಬಹಳ ಗಂಭೀರವಾಗಿ ಕ್ರೀಡೆಯನ್ನು ಆರಂಭಿಸಿದ ಭಾವಿನಬೆನ್ ಗೆ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರು ಸ್ಪೂರ್ತಿಯಂತೆ. ಸಚಿನ್ ಈಕೆಯ ಆರಾಧ್ಯ ದೈವವಾಗಿದ್ದು, ಜಪಾನ್ ನಿಂದ ಹಿಂದಿರುಗಿದ ಬಳಿಕ ತನ್ನ ಬೆಳ್ಳಿ ಪದಕವನ್ನು ಕ್ರಿಕೆಟ್ ದಂತಕಥೆ ಸಚಿನ್ ಅವರಿಗೆ ತೋರಿಸುವ ಬಯಕೆ ಹೊಂದಿದ್ದಾರೆ.
BIG NEWS: ರಾಮನಗರದವರೆಗೂ ಮೆಟ್ರೋ ವಿಸ್ತರಣೆ; ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ
“ನಾನು ಯಾವಾಗಲೂ ಸಚಿನ್ ತೆಂಡೂಲ್ಕರ್ ಅವರಿಂದ ಸ್ಪೂರ್ತಿ ಪಡೆದಿದ್ದೇನೆ. ನಾನು ಅವರನ್ನು ಕಾಣಲು ಬಯಸುತ್ತೇನೆ. ಹಾಗೂ ಅವರಿಂದ ನನಗೆ ಮತ್ತಷ್ಟು ಆತ್ಮವಿಶ್ವಾಸ ನೀಡುವ ಮಾತನ್ನು ಕೇಳಲು ಬಯಸುತ್ತೇನೆ” ಎಂದು ಮಾಧ್ಯಮವೊಂದಕ್ಕೆ ಭಾವಿನಬೆನ್ ತಿಳಿಸಿದ್ದಾರೆ.
ಇನ್ನು ತನ್ನ ಮಾನಸಿಕ ಶಕ್ತಿಯ ಬಗ್ಗೆ ತಿಳಿಸಿದ ಅವರು, “ಧ್ಯಾನವೇ ನನ್ನ ಶಕ್ತಿ. ಟೇಬಲ್ ಟೆನಿಸ್ ಅಂಥಹುದೇ ಆಟವಾಗಿದ್ದು, ಇದು 10 ರಿಂದ 15 ನಿಮಿಷಗಳಲ್ಲಿ ಮುಗಿಯುತ್ತದೆ. ಇದು ವಿಶ್ವದ 2ನೇ ಅತಿ ವೇಗದ ಆಟವಾಗಿದೆ. ಹೀಗಾಗಿ ನಾನು ಧ್ಯಾನದ ಮೂಲಕ ನನ್ನ ಮನಸ್ಸನ್ನು ನಿಯಂತ್ರಿಸುತ್ತೇನೆ. ಅದು ನನಗೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.