ಹೆಚ್ಚಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ಮುಖ, ತಲೆಗೂದಲಿನ ಸೌಂದರ್ಯದ ಬಗ್ಗೆ ವಿಶೇಷ ಆಸಕ್ತಿ, ಕಾಳಜಿ ಇರುತ್ತದೆ. ಕೂದಲು ಉದ್ದವಾಗಿದ್ದು, ಸಿಲ್ಕಿಯಾಗಿರಬೇಕು ಅಂತಾ ಹಲವು ಹೆಣ್ಮಕ್ಕಳು ಇಷ್ಟಪಡುತ್ತಾರೆ. ಅದಕ್ಕೆ ಪಾರ್ಲರ್ ಮೊರೆ ಹೋಗಿ ದುಂದುವೆಚ್ಚನೂ ಮಾಡುತ್ತಾರೆ. ಇದರ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿ ನಿಮ್ಮ ಕೂದಲನ್ನು ಸಿಲ್ಕಿಯಾಗಿ ಮಾಡಬಹುದು. ಅದು ಹೇಗೆ ಅಂತೀರಾ ಈ ಕೆಳಗಿನ ಟಿಪ್ಸ್ ಓದಿ…
ಮೊದಲಿಗೆ ಒಂದು ಬೌಲ್ ಗೆ ಅಕ್ಕಿ ಹಿಟ್ಟು 4 ಟೀ ಸ್ಪೂನ್ ಹಾಕಿ, ನಂತರ ಮುಲ್ತಾನ್ ಮಿಟ್ಟಿ 4 ಟೀ ಸ್ಪೂನ್, 3 ಟೀ ಸ್ಪೂನ್ ಅಲೋವೆರಾ ಜೆಲ್, ಹಾಲು 1/4 ಕಪ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಪೇಸ್ಟ್ ದಪ್ಪ ಇರಬೇಕು. ಬೇಕಿದ್ದರೆ ನೀರು ಸೇರಿಸಬಹುದು. ಒಂದು ವೇಳೆ ನಿಮ್ಮದು ಒಣಕೂದಲಾಗಿದ್ದಲ್ಲಿ 2 ಟೀ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಈ ಪೇಸ್ಟ್ ಗೆ ಮಿಕ್ಸ್ ಮಾಡಬೇಕು. ಅಕ್ಕಿಹಿಟ್ಟು, ಮುಲ್ತಾನ್ ಮಿಟ್ಟಿ ಮುಖಕ್ಕೆ ಮಾತ್ರವಲ್ಲ ಕೂದಲಿನ ಆರೈಕೆಗೂ ಪ್ರಯೋಜನಕಾರಿಯಾಗಿದೆ. ಇದರಿಂದ ತಲೆಹೊಟ್ಟಿಗೂ ಪರಿಹಾರ ಸಿಗಲಿದೆ.
ಈ ಪೇಸ್ಟ್ ಅನ್ನು ನಡು ಬೈತಲೆ ತೆಗೆದು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚುತ್ತಾ ಬನ್ನಿ. 5 ನಿಮಿಷದ ಬಳಿಕ ಹಲ್ಲು ಅಗಲವಾಗಿರುವ ಬಾಚಣಿಗೆ ತೆಗೆದುಕೊಂಡು ನೀಟಾಗಿ ನಿಧಾನವಾಗಿ ಬಾಚಿ. 15 ನಿಮಿಷ ಹಾಗೆಯೇ ಬಿಟ್ಟು ನಂತರ ಸ್ನಾನ ಮಾಡಿ. ಶೇಕಡಾ 80ರಷ್ಟು ಕೂದಲು ಒಣಗಿದ ಬಳಿಕ ತಲೆಗೂದಲನ್ನು ನಿಧಾನಕ್ಕೆ ಬಾಚಿ. ಸಿಲ್ಕಿಯಾಗಿ, ಶೈನಿಯಾಗಿ ಹೊಳೆಯುವ ಕೂದಲು ನಿಮ್ಮದಾಗುತ್ತದೆ.