ರಾಂಚಿ: ತಂಬಾಕು ಸೇವಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ಜಾರ್ಖಂಡ್ ಸರ್ಕಾರ ಸರ್ಕಾರಿ ನೌಕರರಿಗೆ ಸೂಚನೆ ನೀಡಿದೆ.
ಸರ್ಕಾರಿ ಉದ್ಯೋಗಿಗಳು ಮತ್ತು ಸರ್ಕಾರದ ಉದ್ಯೋಗಕ್ಕೆ ಸೇರುವ ಆಕಾಂಕ್ಷಿಗಳು ಇನ್ನು ಮುಂದೆ ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನ ಸೇವಿಸುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಬೇಕು. 2021 ರ ಏಪ್ರಿಲ್ 1 ರಿಂದ ಹೊಸ ಜಾರಿಗೆ ಬರಲಿದೆ.
ಕಚೇರಿಯ ಒಳಗಾಗಲಿ, ಹೊರಗಾಗಲಿ ತಂಬಾಕು ಉತ್ಪನ್ನಗಳನ್ನು ಸೇವಿಸಬಾರದು ಎಂದು ಸರ್ಕಾರ ತಿಳಿಸಿದೆ. ಈ ಕುರಿತು ಘೋಷಿಸುವ ಅಫಿಡವಿಟ್ ನೀಡುವಂತೆ ಸೂಚನೆ ನೀಡಲಾಗಿದೆ. ರಾಂಚಿಯಲ್ಲಿ ನಡೆದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದ್ದು, ತಂಬಾಕು ಉತ್ಪನ್ನಗಳನ್ನು ಹೋಟೆಲ್ ಗಳಲ್ಲಿ ಮಾರಾಟ ಮಾಡುವಂತಿಲ್ಲ. ಚಹಾ ಬಿಸ್ಕತ್ತು ಅಂಗಡಿಗಳಲ್ಲಿಯೂ ತಂಬಾಕು ಉತ್ಪನ್ನ ಮಾರದಂತೆ ನಿರ್ಬಂಧ ವಿಧಿಸಲು ಚರ್ಚೆ ನಡೆಸಲಾಗಿದೆ.
ಜಾರ್ಖಂಡ್ ಸಚಿವ ಆಲಂಗೀರ್ ಆಲಂ ಅವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೊಸ ಪೀಳಿಗೆಯನ್ನು ಕೆಟ್ಟ ಅಭ್ಯಾಸಗಳಿಂದ ಮುಕ್ತವಾಗಿಸಲು ಇಂತಹ ಕ್ರಮ ಅನಿವಾರ್ಯ ಎಂದು ಹೇಳಿದ್ದಾರೆ.
ನೌಕರರು ತಂಬಾಕು ಉತ್ಪನ್ನ ಸೇವಿಸುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದ್ದು, ಏಪ್ರಿಲ್ 1, 2021 ರಿಂದ ಜಾರ್ಖಂಡ್ ಸರ್ಕಾರಿ ವಲಯದಲ್ಲಿ ಉದ್ಯೋಗ ಪಡೆಯುವವರು ತಂಬಾಕು ಉತ್ಪನ್ನಗಳನ್ನು ಕಚೇರಿಯಲ್ಲಿ ಮಾತ್ರವಲ್ಲದೆ ಹೊರಗೆ ಕೂಡ ಸೇವಿಸುವುದಿಲ್ಲವೆಂದು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಾರ್ಖಂಡ್ ರಾಜ್ಯದ ನೋಡಲ್ ಅಧಿಕಾರಿ ಎಲ್.ಆರ್. ಪಾಠಕ್ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಶಿವ ಪೂಜನ್ ಪಾಠಕ್ ಅವರು, ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದು, ಮದ್ಯನಿಷೇಧ ಬಗ್ಗೆಯೂ ಗಂಭೀರ ಚಿಂತನೆ ನಡೆಸಬೇಕು. ರಾಜ್ಯವನ್ನು ಸಂಪೂರ್ಣವಾಗಿ ಮಾದಕ ವಸ್ತುಗಳಿಂದ ಮುಕ್ತಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.