
ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರದಿಂದ ಕಾಂಡೋಮ್ ಸಹ ನೀಡಬೇಕೆಂದು ನೀವು ಬಯಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಇಂಥದೊಂದು ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ‘ಸಂವಾದ’ ಕಾರ್ಯಕ್ರಮದಲ್ಲಿ ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಅವರು ಪಾಲ್ಗೊಂಡಿದ್ದು, ಈ ವೇಳೆ ವಿದ್ಯಾರ್ಥಿನಿಯೊಬ್ಬರು ಸರ್ಕಾರ ಶಾಲಾ ವಿದ್ಯಾರ್ಥಿನಿಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಹರ್ಜೋತ್ ಕೌರ್, ನಾಳೆ ದಿನ ನೀವು ಸರ್ಕಾರ ಜೀನ್ಸ್ ಕೂಡ ನೀಡಲಿ ಎಂದು ಕೇಳುತ್ತೀರಿ. ಕೊನೆಗೆ ಕಾಂಡೋಮ್ ಸಹ ಸರ್ಕಾರವೇ ನೀಡಲಿ ಎಂದು ಬಯಸುತ್ತೀರಿ ಎಂದು ಹೇಳಿದ್ದಾರೆ. ಆದರೆ ತಕ್ಷಣವೇ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ಸೇವೆ ನೀಡುವ ಸಲುವಾಗಿಯೇ ನಾವು ಸರ್ಕಾರವನ್ನು ಆಯ್ಕೆ ಮಾಡಿರುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಇದರಿಂದ ಸಿಡಿಮಿಡಿಗೊಂಡ ಹರ್ಜೋತ್ ಕೌರ್, ನೀವು ಮತ ಹಾಕಲೇಬೇಡಿ. ಇದು ಪಾಕಿಸ್ತಾನವಾಗಲಿ ಎಂದ ವೇಳೆ ವಿದ್ಯಾರ್ಥಿನಿ, ಇದು ಭಾರತ. ನಾನು ಭಾರತೀಯಳು. ಇದು ಏಕೆ ಪಾಕಿಸ್ತಾನವಾಗಬೇಕು ಎಂದು ಕೇಳಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಐಎಎಸ್ ಅಧಿಕಾರಿಯ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ.