ಬೆಳಗಾವಿಯಲ್ಲಿ ಜನತೆಗೊಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಕೋವಿಡ್ 19 ಕಾರಣವನ್ನು ನೀಡಿ ಸಾಮಾನ್ಯ ಜನತೆಗೆ ಪ್ರಸಿದ್ಧ ಯಲ್ಲಮ್ಮ ದೇವಿ ದೇಗುಲದ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಈ ನಿರ್ಬಂಧದಿಂದ ವಿನಾಯ್ತಿ ನೀಡಲಾಗಿದೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಈ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿ ರೇಣುಕಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಮೋದ್ ಸಾವಂತ್ಗೆ ಉಪಸಭಾಪತಿ ಆನಂದ್ ಮಾಮನಿ ಸಾಥ್ ಕೂಡ ನೀಡಿದ್ದರು.
ಯಲ್ಲಮ್ಮ ದೇಗುಲಕ್ಕೆ ಗೋವಾ ಸಿಎಂ ಭೇಟಿಯು ಸವದತ್ತಿ ಭಾಗದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಕೊರೊನಾ ಲಾಕ್ಡೌನ್ನಿಂದ ದೇವಸ್ಥಾನದ ಬಾಗಿಲು ಹಾಕಲಾಗಿದೆ. ಈ ಪರಿಸ್ಥಿತಿಯಲ್ಲಿ ವಿವಿಐಪಿಗೆ ಮಾತ್ರ ಬೇರೆ ನ್ಯಾಯವಾ ಎಂದು ಸ್ಥಳೀಯರು ಪ್ರಶ್ನೆ ಮಾಡ್ತಿದ್ದಾರೆ. ಗೋವಾ ಸಿಎಂ ದೇಗುಲ ದರ್ಶನದ ವೇಳೆಯಲ್ಲಿ ಮಾಧ್ಯಮಗಳಿಗೂ ಕೂಡ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಈ ಹಿಂದೆ ಅಂದರೆ ಮೇ ತಿಂಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡುವ ಮೂಲಕ ಕೋವಿಡ್ 19 ನಿರ್ಬಂಧಗಳನ್ನು ಮುರಿದಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿತ್ತು. ಯಾರಿಗೂ ಕೂಡ ದೇಗುಲ ದರ್ಶನಕ್ಕೆ ಅವಕಾಶ ಇರಲಿಲ್ಲ.